ಮಂಜೇಶ್ವರ: ಕುಂಜತ್ತೂರು ಜಿ ವಿ ಎಚ್ ಎಸ್ ಎಸ್ ಶಾಲೆ 2013 - 2014 ನೇ ವರ್ಷದ ಗುರು ಶಿಷ್ಯರ ಅಪೂರ್ವ ಸಂಗಮ ಕಾರ್ಯಕ್ರಮ ಭಾನುವಾರ ನಡೆಯಿತು.
ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿರುವಾಗ ನಡೆದ ಘಟನೆಗಳ ಬುತ್ತಿ ಬಿಚ್ಚಿಟ್ಟಾಗ ಎಲ್ಲರ ಮನಸ್ಸು ಬಾಲ್ಯದತ್ತ ಹೊರಳಿತು. ಅಧ್ಯಾಪಕರಿಗೆ ವಿದ್ಯಾರ್ಥಿಗಳ ಅಪೂರ್ವ ಸಂಗಮವನ್ನು ನೋಡಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಲು ಸಂತೋಷದಿಂದ ಮಾತೇ ಇಲ್ಲವಾಯಿತು.
ಕುಂಜತ್ತೂರು ಶಾಲೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹ್ಮಾನ್ ಉದ್ಯಾವರ ರವರ ಅಧ್ಯಕ್ಷತೆಯಲ್ಲಿ ಕುಂಜತ್ತೂರು ಶಾಲೆಯಲ್ಲಿ ನಡೆದ ಪೂರ್ವ ವಿದ್ಯಾರ್ಥಿ ಸಂಗಮವನ್ನು ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ದಯಾಕರ ಮಾಡ, ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ ಕೆ, ಹಿರಿಯ ಅಧ್ಯಾಪಕಿ ಪ್ರಮೀಳ ಕುಮಾರಿ ಟೀಚರ್, ನಿವೃತ ಅಧ್ಯಾಪಕಿ ಸರಸ್ವತಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಅಧ್ಯಾಪಕರುಗಳನ್ನು ವಿದ್ಯಾರ್ಥಿಗಳ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮಿಶ್ರಿಯಾ ಸ್ವಾಗತಿಸಿ, ಇರ್ಷಾನ ವಂದಿಸಿದರು. ಬಳಿಕ ಭೋಜನ ಕೂಟ ನಡೆಯಿತು.