ಕಾಸರಗೋಡು: ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೇರಳವನ್ನು ಮತ್ತೆ ಮೇಲಕ್ಕೆತ್ತಲು ಹಲವು ಯೋಜನೆಗಳ ಸಹಿತ ನಾಲ್ಕು ಗಂಟೆಗಳೊಳಗೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ತಲುಪುವ ಕ್ಷಿಪ್ರ ರೈಲು ಯೋಜನೆಯನ್ನು ಘೋಷಿಸಲಾಗಿದೆ. ಕಾಸರಗೋಡು ಪ್ಯಾಕೇಜ್‍ನಲ್ಲಿ 91 ಕೋಟಿ ರೂ. ಮತ್ತು ಎಂಡೋ ಸಂತ್ರಸ್ತರ ಪುನರ್ವಸತಿ ಕಲ್ಪಿಸಲು 20 ಕೋಟಿ ರೂ. ಕಾದಿರಿಸಿ ಕೇರಳದ 2019-20 ನೇ ಹಣಕಾಸು ವರ್ಷದ ಮುಂಗಡಪತ್ರವನ್ನು ಗುರುವಾರ ಬೆಳಗ್ಗೆ ರಾಜ್ಯ ಹಣಕಾಸು ಸಚಿವ ಡಾ|ಥೋಮಸ್ ಐಸಾಕ್ ವಿಧಾನಸಭೆಯಲ್ಲಿ ಮಂಡಿಸಿದರು.
ಬಜೆಟ್‍ನಲ್ಲಿ ಒಟ್ಟು 39,807 ಕೋಟಿ ರೂ. ಯೋಜನೆಗಳನ್ನು ಒಳಪಡಿಸಲಾಗಿದೆ. ಕೈಗಾರಿಕಾ ಪಾರ್ಕ್‍ಗಳಿಗೆ 141 ಕೋಟಿ ರೂ. ನೀಡಲಾಗುವುದು. ಅಯ್ಯಂಗಾಳಿ ಉದ್ಯೋಗ ಖಾತರಿ ಯೋಜನೆಗೆ 75 ಕೋಟಿ ರೂ. ಮೀಸಲಿರಿಸಲಾಗಿದೆ. ಸ್ಟಾರ್ಟ್ ಅಪ್ ಉದ್ದಿಮೆಗಾಗಿ 700 ಕೋಟಿ ರೂ. ಮೀಸಲಿಡಲಾಗಿದೆ. ಮಹಾಪ್ರವಾಹದಿಂದ ಪೂರ್ಣವಾಗಿ ತತ್ತರಿಸಿರುವ ಕೇರಳ ಪುನರ್ ನಿರ್ಮಾಣದ ಹಂತದಲ್ಲಿದೆ. ಕೇರಳಕ್ಕೆ ಕೇಂದ್ರ ಸರಕಾರ ಅಗತ್ಯದ ಸಹಾಯ ಒದಗಿಸಿಲ್ಲ. ಕೇರಳದೊಂದಿಗೆ ಕೇಂದ್ರ ಯಾಕಾಗಿ ಇಂತಹ ನೀತಿ ಅನುಸರಿಸುತ್ತಿದೆ ಎಂದು ಸಚಿವರು ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ನವ ಕೇರಳಕ್ಕಾಗಿ 15 ಹೊಸ ಯೋಜನೆಗಳಿಗೆ ರೂಪು ನೀಡಲಾಗುವುದು. ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವವರಿಗಾಗಿ 1131 ಕೋಟಿ ರೂ. ನೆರವನ್ನು ಈಗಾಗಲೇ ವಿತರಿಸಲಾಗಿದೆ. ಪ್ರವಾಹ ಪೀಡಿತ ಪ್ರತೀ ಪಂಚಾಯತ್‍ಗಳಿಗೆ ತಲಾ 25 ಕೋಟಿ ರೂ. ನಂತೆ ವಿಶೇಷ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು. ಕೇರ ಗ್ರಾಮ ಯೋಜನೆಗೆ 43 ಕೋಟಿ ರೂ. ಮತ್ತು ಲೈಫ್ ಸಯನ್ಸ್ ಪಾರ್ಕ್‍ಗೆ 20 ಕೋಟಿ ರೂ. ಮೀಸಲಿರಿಸಲಾಗಿದೆ.
ಬಜೆಟ್‍ನಲ್ಲಿ ವಯನಾಡು ಮತ್ತು ಆಲಪ್ಪುಳ ಜಿಲ್ಲೆಗೆ ಹೆಚ್ಚು ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ. ಈ ಎರಡು ಜಿಲ್ಲೆಗಳಲ್ಲಿ ಪ್ರವಾಹದಿಂದ ಭಾರೀ ನಾಶನಷ್ಟ ಸಂಭವಿಸಿತ್ತು.
ಎಲ್ಲಾ ತಾಲೂಕು ಸರಕಾರಿ ಆಸ್ಪತ್ರೆಗಳನ್ನು ನವೀಕರಿಸಲಾಗುವುದು. ಮೀನು ಕಾರ್ಮಿಕರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಅದಕ್ಕಾಗಿ ಮತ್ಸ್ಯಫೆಡ್‍ಗೆ 10 ಕೋಟಿ ರೂ. ನೀಡಲಾಗುವುದು. ಕರಾವಳಿ ಪ್ರದೇಶಗಳ ಅಭಿವೃದ್ಧಿಗಾಗಿ 1000 ಕೋಟಿ ರೂ. ಸಹಾಯ ನೀಡಲಾಗುವುದು. ಕರಾವಳಿ ಪ್ರದೇಶಗಳ ಸರಕಾರಿ ತಾಲೂಕು ಆಸ್ಪತ್ರೆಗಳ ಅಭಿವೃದ್ಧಿಗಾಗಿ 400 ಕೋಟಿ ರೂ. ಮೀಸಲಿರಿಸಲಾಗಿದೆ.
ವಿದ್ಯುತ್ ಚಾಲಿತ ಕೆಎಸ್‍ಆರ್‍ಟಿಸಿ ಬಸ್ ಸೇವೆ ಆರಂಭಿಸಲಾಗುವುದು. ಕಾಸರಗೋಡಿನಿಂದ ತಿರುವನಂತಪುರ ತನಕದ ಕರಾವಳಿ ಹೆದ್ದಾರಿ ನಿರ್ಮಾಣಕ್ಕಾಗಿ ಕಿಫ್‍ಬಿ ಮೂಲಕ 6000 ಕೋಟಿ ರೂ. ಮೀಸಲಿರಿಸಲಾಗಿದೆ. ಕಾಸರಗೋಡು-ತಿರುವನಂತಪುರ ತನಕ 515 ಕಿ.ಮೀ. ಕ್ಷಿಪ್ರ ರೈಲು ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆ ಜಾರಿಗೊಂಡಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಾಲ್ಕು ತಾಸುಗಳಲ್ಲಿ ತಲುಪಬಹುದು. ಇದು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲುಗಳು ಈ ಹಳಿಯಲ್ಲಿ ಸೇವೆ ನಡೆಸಲಿವೆ.
ಹಿರಿಯ ನಾಗರಿಕರಿಗೆ ನೀಡುವ ಕಲ್ಯಾಣ ಪಿಂಚಣಿ ಮೊತ್ತವನ್ನು 1100 ರೂ.ನಿಂದ 1200 ಗೇರಿಸಲಾಗುವುದು. ಐದು ವರ್ಷದೊಳಗೆ ಈ ಪಿಂಚಣಿ ಮೊತ್ತವನ್ನು 1500 ರೂ.ಗೇರಿಸಲಾಗುವುದು. ಕೇರಳ ಬ್ಯಾಂಕ್ ಶೀಘ್ರ ಅಸ್ತಿತ್ವಕ್ಕೆ ಬರಲಿದೆ. ಗಲ್‍ನಲ್ಲಿ ದುಡಿಯುತ್ತಿರುವ ಕೇರಳಿಯರು ಅಲ್ಲಿ ಸಾವಿಗೀಡಾದರೆ ಅವರ ಮೃತ ದೇಹವನ್ನು ನೋರ್ಕಾದ ಸಹಾಯದೊಂದಿಗೆ ಉಚಿತವಾಗಿ ಊರಿಗೆ ತಲುಪಿಸುವ ಯೋಜನೆಯನ್ನು ಬಜೆಟ್‍ನಲ್ಲಿ ಒಳಪಡಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ 1420 ಕೋಟಿ ರೂ. ಮೀಸಲಿರಿಸಲಾಗಿದೆ. ರಬ್ಬರ್ ಕೃಷಿ ಬೆಂಬಲ ನೀಡಲು 500 ಕೋಟಿ ರೂ. ಮೀಸಲಿರಿಸಲಾಗಿದೆ. ಕಿಫ್‍ಬಿ ಸಹಾಯದೊಂದಿಗೆ ರಾಜ್ಯದಲ್ಲಿ ಹೊಸದಾಗಿ 30 ಜಲವಿದ್ಯುತ್ ಯೋಜನೆ ಸ್ಥಾಪಿಸಲಾಗುವುದು. ಇಡುಕ್ಕಿಯಲ್ಲಿ ಹೊಸ ವಿದ್ಯುತ್ ಸ್ಥಾವರ ಆರಂಭಿಸಲಾಗುವುದು. ಎಲ್ಲಾ ಸರಕಾರಿ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಸೋಲಾರ್ ಪ್ಯಾನಲ್‍ಗಳನ್ನು ಸ್ಥಾಪಿಸಿ ಸೌರ ವಿದ್ಯುತ್ ಉತ್ಪಾದಿಸಲಾಗುವುದು. ಮನೆಗಳಲ್ಲಿ ಸಾಧಾರಣ ಬಲ್ಬುಗಳನ್ನು ಹೊರತುಪಡಿಸಿ ಅತೀ ಕಡಿಮೆ ವಿದ್ಯುತ್ ಬಳಸುವ ಎಲ್‍ಇ.ಡಿ. ಬಲ್ಬುಗಳನ್ನು ವಿತರಿಸುವ ಯೋಜನೆ ಆರಂಭಿಸಲಾಗುವುದು. ಇದರಿಂದ 50 ಮೆಗಾವಾಟ್ ವಿದ್ಯುತ್ ಉಳಿತಾಯವಾಗಲಿದೆ. ವಿದ್ಯುತ್ ಯೋಜನೆಗಾಗಿ ಕಿಫ್‍ಬಿ 6375 ಕೋಟಿ ರೂ. ನೀಡಲು ಮುಂದಾಗಿದೆ. ಮಹಾಪ್ರವಾಹದಿಂದ ಕೇರಳಕ್ಕೆ 15000 ಕೋಟಿ ರೂ. ಆದಾಯ ನಷ್ಟವಾಗಿದೆ. ಮುಖ್ಯಮಂತ್ರಿಯ ಪರಿಹಾರ ನಿ„ಗೆ ಈ ತನಕ 3229 ಕೋಟಿ ರೂ. ಲಭಿಸಿದೆ.
ರಾಜ್ಯದಲ್ಲಿ ಎಲ್ಲಾ ಆಟೋ ರಿಕ್ಷಾಗಳನ್ನು ಹಂತಹಂತವಾಗಿ ವಿದ್ಯುತ್ ಆಟೋ ರಿಕ್ಷಾಗಳನ್ನಾಗಿ ಪರಿವರ್ತಿಸಲಾಗುವುದು. ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ವಿದ್ಯುತ್ ಚಾಲಿತ ಬಸ್ಸುಗಳನ್ನಾಗಿ ಪರಿವರ್ತಿಸಲಾಗುವುದು.
ಕಾಸರಗೋಡು-ತಿರುವನಂತಪುರ ತನಕದ ಜಲ ಸಾರಿಗೆ ಯೋಜನೆಯನ್ನು 2020 ರೊಳಗಾಗಿ ಪೂರ್ತಿಗೊಳಿಸಲಾಗುವುದು. ಶಾಲೆಗಳ ಸಾರ್ವಜನಿಕ ಶಿಕ್ಷಣ ವಲಯಕ್ಕೆ ಕಿಫ್‍ಬಿ ಸಹಾಯ ಮೂಲಕ 1320 ಕೋಟಿ ರೂ. ಮೀಸಲಿರಿಸಲಾಗಿದೆ.
ವಿಮಾ ಸಂರಕ್ಷಣೆ : ಎಲ್ಲಾ ಕುಟುಂಬಗಳಿಗೆ ವಿಮಾ ಸಂರಕ್ಷಣೆ ಏರ್ಪಡಿಸಲಾಗುವುದು. ಪ್ರತಿ ಕುಟುಂಬಗಳ ನಾಲ್ವರಿಗೆ ಇದರ ಪ್ರಯೋಜನ ಲಭಿಸಲಿದೆ. ಕಂತುಗಳನ್ನು ಪಾವತಿಸಿ ಈ ಯೋಜನೆಯ ಸದಸ್ಯರಾಗಬಹುದು.
ಯೋಜನಾ ಮೊತ್ತ
* ಕೃಷಿ ವಲಯದ ಅಭಿವೃದ್ಧಿಗೆ 2500 ಕೋಟಿ ರೂ.
* ತರಕಾರಿ ಕೃಷಿ ಅಭಿವೃದ್ಧಿಗೆ 75 ಕೋಟಿ ರೂ.
* ಬೆಳೆ ವಿಮೆಗಾಗಿ ತೆಂಗು ಕೃಷಿಗೆ 170 ಕೋಟಿ ರೂ.
* ಐ.ಟಿ ವಲಯಕ್ಕೆ 574 ಕೋಟಿ ರೂ.
* ಧಾನ್ಯ ಬೆಳೆಗಳಿಗೆ 157 ಕೋಟಿ ರೂ.
* ಪ್ರವಾಸೋದ್ಯಮಕ್ಕೆ 278 ಕೋಟಿ ರೂ.
* ಖಾದಿ ವಲಯಕ್ಕೆ 14 ಕೋಟಿ ರೂ.
* ಕಿರು ಉದ್ದಿಮೆಗೆ 163 ಕೋಟಿ ರೂ.
* ಬಡ್ಸ್ ಸ್ಕೂಲ್‍ಗಳಿಗೆ 35 ಕೋಟಿ ರೂ.
* ಹಿಂದುಳಿದ ವಿಭಾಗದ ಕಲ್ಯಾಣಕ್ಕಾಗಿ 114 ಕೋಟಿ ರೂ.
* ಶಬರಿಮಲೆ ರಸ್ತೆ ಅಭಿವೃದ್ಧಿಗಾಗಿ 200 ಕೋಟಿ ರೂ.
* ಶಬರಿಮಲೆ ದೇವಸ್ವಂ ಮಂಡಳಿಗೆ 100 ಕೋಟಿ ರೂ.
* ಶಬರಿಮಲೆ ಒಟ್ಟು ಅಭಿವೃದ್ಧಿಗೆ 739 ಕೋಟಿ ರೂ.
* ಶಬರಿಮಲೆ ಮಾಸ್ಟರ್ ಪ್ಲಾನ್‍ಗಾಗಿ 25 ಕೋಟಿ ರೂ. ಮೀಸಲಿಡಲಾಗಿದೆ.
ದರ ಹೆಚ್ಚಳ : ಮದ್ಯ, ಬಿಯರ್, ವೈನ್, ಸಿನಿಮಾ ಟಿಕೆಟ್, ಚಿನ್ನಾಭರಣ, ಬೆಳ್ಳಿ, ಸಿಮೆಂಟ್, ಗ್ರಾನೈಟ್, ಪೈಂಟ್, ಸಾಬೂನು, ಶೀತಲ ಪಾನೀಯ, ಚಾಕ್ಲೆಟ್, ಪ್ಲೈವುಡ್ ದರ ಹೆಚ್ಚಳವಾಗಲಿದೆ.
* ಉತ್ತರ-ದಕ್ಷಿಣ ಜಲಸಾರಿಗೆ ಯೋಜನೆ 2020 ರಲ್ಲಿ ಪೂರ್ಣ *ಹಸಿವು ರಹಿತ ಕೇರಳ ನಿರ್ಮಾಣ * ಕಲ್ಯಾಣ ಪಿಂಚಣಿ 1100 ರೂ.ನಿಂದ 1200 ರೂ.ಗೆ ಏರಿಕೆ * ಕಾಸರಗೋಡು ಪ್ಯಾಕೇಜ್‍ಗೆ 91 ಕೋಟಿ ರೂ. * ಎಂಡೋ ಸಂತ್ರಸ್ತರಿಗೆ 20 ಕೊಟಿ ರೂ. * ಕುಟುಂಬಶ್ರೀ 1000 ಕೋಟಿ ರೂ. * ರಬ್ಬರ್ ಸಬ್ಸಿಡಿಗೆ 500 ಕೋಟಿ ರೂ. * ಬೇಕಲ-ಕೋವಳಂ ಜಲಸಾರಿಗೆ ಯೋಜನೆ ಸಾಕಾರ * ಕಾಸರಗೋಡು-ಕೋವಳಂ ಸಮಾನಾಂತರ ರೈಲು ಹಳಿ * ಕೆಎಸ್‍ಆರ್‍ಟಿಸಿಗೆ 1000 ಕೋಟಿ ರೂ. * ಪ್ರಳಯದಿಂದ ನಾಶನಷ್ಟ ಸಂಭವಿಸಿದ ವ್ಯಾಪಾರಿಗಳ ಪುನರ್ವಸತಿಗೆ 20 ಕೋಟಿ ರೂ.