ನವದೆಹಲಿ: 2019 ಹೊಸ ವರ್ಷ ಪ್ರಾರಂಭವಾಗಿದ್ದು, ಹೊಸ ವರ್ಷವನ್ನು ದೇಶಾದ್ಯಂತ ಬಾಣ ಬಿರುಸುಗಳ ಚಿತ್ತಾರ (ಪಟಾಕಿ ಸಿಡಿಸಿ), ರಂಗು ರಂಗಿನ ಬೆಳಕಿನ ಸಂಭ್ರಮಾಚರಣೆಯ ಮೂಲಕ ಬರಮಾಡಿಕೊಳ್ಳಲಾಗಿದೆ.
ಕೇಕ್ ಕತ್ತರಿಸಿ ಪರಸ್ಪರ ಹಂಚಿಕೊಳ್ಳುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ರಾಷ್ಟ್ರರಾಜಧಾನಿಯ ಇಂಡಿಯಾ ಗೇಟ್ ವೇ ಬಳಿ ನೆರೆದಿದ್ದ ಸಮೂಹ ಚುಮು ಚುಮು ಚಳಿಯ ನಡುವೆಯೂ ಹೊಸ ವರ್ಷಕ್ಕೆ ಬೆಚ್ಚನೆಯ ಸ್ವಾಗತ ಕೋರಿದ್ದು ಇಂಡಿಯಾ ಗೇಟ್ ಗೆ ತ್ರಿವರ್ಣ ಧ್ವಜದ ಬೆಳಕಿನಿಂದ ಅಲಂಕಾರ ಮಾಡಲಾಗಿತ್ತು.
ಮುಂಬೈ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ್ನು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೀಪಗಳಿಂದ ಅಲಂಕಾರಗೊಳಿಸಲಾಗಿದ್ದರೆ, ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಮನೆಯನ್ನು ದೀಪಗಳಿಂದ ಸಿಂಗರಿಸಲಾಗಿತ್ತು. ಇನ್ನು ಬೆಂಗಳೂರಿನ ಬ್ರಿಗೇಡ್, ಎಂ ಜಿ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ದೇಶದ ಜನತೆ 2019 ನ್ನು ಅದ್ಧೂರಿ ಸಂಭ್ರಮಾಚರಣೆಯಲ್ಲಿ ತೊಡಗುವ ಮೂಲಕ ಸ್ವಾಗತಿಸಿದೆ.