ನವದೆಹಲಿ: 2019 ರ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ನಡೆಸುವ ಸಂಬಂಧ ಚುನಾವಣಾ ಆಯೋಗ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಚುನಾವಣೆಗೆ ಸಂಬಂಧಪಟ್ಟ ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಕ್ಕೆ ಸರ್ಕಾರಗಳು ಈಗಲೇ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ. 16ನೇ ಲೋಕಸಭೆಯ ಅವಧಿ ಜೂನ್ 3 ರಂದು ಅಂತ್ಯಗೊಳ್ಳಲಿದೆ. ಈ ನಡುವೆಯೇ ಆಂಧ್ರಪ್ರದೇಶ, ಒಡಿಸ್ಸಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ರಾಜ್ಯ, ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ತಮ್ಮ ಸ್ವ-ಜಿಲ್ಲೆಗಳಲ್ಲಿ ಅಥವಾ ದೀರ್ಘಕಾಲದ ಸೇವೆ ಸಲ್ಲಿಸಿದ ಸ್ಥಳದಲ್ಲಿ ಮುಂದುವರೆಯಲು ಅವಕಾಶ ನೀಡದೇ ವರ್ಗಾವಣೆ ಮಾಡಬೇಕು ಎಂದು ತಿಳಿಸಿದೆ. ಅಧಿಕಾರಿಗಳು 4 ವರ್ಷಗಳಲ್ಲಿ ಅದೇ ಸ್ಥಳದಲ್ಲಿ 3 ವರ್ಷ ಕರ್ತವ್ಯವನ್ನು ಪೂರ್ಣಗೊಳಿಸಿದ್ದರೆ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.