ಮಂಜೇಶ್ವರ: ಗಡಿನಾಡಿನ ಪ್ರತಿಷ್ಠಿತ ನೃತ್ಯ ಶಿಕ್ಷಣ ಕೇಂದ್ರವಾದ, ನಾಟ್ಯಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ನಿರ್ದೇಶನದ ನಾಟ್ಯನಿಲಯಂನ ಸಾತ್ವಿಕ ಶಾಖಾ ವಿದ್ಯಾರ್ಥಿಗಳಿಂದ ಮಂಜೇಶ್ವರದ ಕಲಾಸ್ಪರ್ಶಂ ಸಭಾಂಗಣದಲ್ಲಿ ಭಾನುವಾರ ಶಿವಾರ್ಪರ್ಣಂ 2019 ನೃತ್ಯ ಪ್ರದರ್ಶನ ನಡೆದು ಜನಮನಸೂರೆಗೊಂಡಿತು.
ಸಮಾರಂಭದ ಮೊದಲು ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮೀ ಹಾಗೂ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ ಸುಪ್ರೀಯಾ ಶೆಣೈ ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸೀತಾರಾಮ ಪಿಲಿಕೋಡ್ಲು ಅಧ್ಯಕ್ಷತೆ ವಹಿಸಿದ್ದರು. ಕೇರಳ ಗ್ರಾಮೀಣ ಬ್ಯಾಂಕ್ ಅಧಿಕಾರಿ ಅಶೋಕ್ ನಾಯಕ್, ಕಾಸರಗೋಡಿನ ಸರಕಾರಿ ವೈದ್ಯಾಧಿಕಾರಿ ಡಾ.ಕೃಷ್ಣ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಉಪನ್ಯಾಸಕ ಡಾ.ಬಾಲಕೃಷ್ಣ ಹೊಸಂಗಡಿ ಹಾಗೂ ನಾಟ್ಯ ನಿಲಯಂ ನ ಸಂಗೀತ ಶಿಕ್ಷಕ ಉಣ್ಣಿಕೃಷ್ಣನ್ ವೀಣಾಲಯಂ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಾಟ್ಯನಿಲಯಂ ನ ವಸ್ತ್ರಾಲಂಕಾರ ಕಲಾವಿದರಾಗಿದ್ದು, ಇದೀಗ ಅನಾರೋಗ್ಯ ಪೀಡಿತರಾಗಿರುವ ಸುರೇಶ್ ಮಂಜೇಶ್ವರ ಅವರಿಗೆ ನಾಟ್ಯಾಲಯದ ವತಿಯಿಂದ ಮತ್ತು ವಿದ್ಯಾರ್ಥಿಗಳ ಪೋಷಕರ ಸಹಕಾರದೊಂದಿಗೆ ಸಂಗ್ರಹಿಸಲಾದ ನೆರವನ್ನು ಹಸ್ತಾಂತರಿಸಲಾಯಿತು.
ಬಳಿಕ ನಡೆದ ಗುರುವಂದನಾ ಸಮಾರಂಭದಲ್ಲಿ ನಾಟ್ಯಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ- ಶರ್ಮಿಳಾ ಬಾಲಕೃಷ್ಣ ದಂಪತಿಗಳನ್ನು ವಿದ್ಯಾರ್ಥಿಗಳು, ಪೋಷಕರು ಅಭಿನಂದಿಸಿದರು. ನಾಟ್ಯನಿಲಯಂ ಸಂಚಾಲಕ ಕಿರಣ್ ಕುಮಾರ್ ಸ್ವಾಗತಿಸಿ, ಶರ್ಮಿಳಾ ಬಾಲಕೃಷ್ಣ ವಂದಿಸಿದರು. ಸಾತ್ವಿಕಾ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.