ಬೆಂಗಳೂರು: ಭಾರತ ಡಿಸೆಂಬರ್ 2021ರ ವೇಳೆಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಗುರಿಯನ್ನು ತಲುಪುತ್ತದೆ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥರು ಹೇಳಿದ್ದಾರೆ.
ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ಮೂಲಕ ಮಾನವರನ್ನು ಸ್ವತಂತ್ರವಾಗಿ ಬಾಹ್ಯಾಕಾಶಕ್ಕೆ ಕಳಿಸಲು ಇಸ್ರೋ ಸಿದ್ದತೆ ನಡೆಸಿದೆ.ಇದರೊಡನೆ ಭಾರತ ಈ ಸಾಧನೆ ಮಾಡುವ ಜಗತ್ತಿನ ನಾಲ್ಕನೇ ರಾಷ್ಟ್ರವಾಗಲಿದೆ.
ಗಗನಯಾನಕ್ಕೆ ಭಾರತದಲ್ಲಿ ಪ್ರಾರಂಭಿಕ ತರಬೇತಿ ನೀಡಲಾಗುತ್ತದೆ.ಬಳಿಕ ರಷ್ಯಾದಲ್ಲಿ ಪ್ರಾಯೋಗಿಕ ತರಬೇತಿ ಇರಲಿದೆ.ಇನ್ನು ತಂಡದಲ್ಲಿ ಮಹಿಳಾ ಗಗನಯಾತ್ರಿಗಳು ಸಹ ಇರಬೇಕೆನ್ನುವುದು ನಮ್ಮ ಗುರಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಕಳೆದ ತಿಂಗಳು ಕೇಂದ್ರ ಗೃಹ ಸಚಿವ ರವಿಶಂಕರ್ ಸಾದ್ ಗಗನಯಾನ್ಭಾಗವಾಗಿ 2022 ರೊಳಗೆ ಮೂರು ಭಾರತೀಯ ಗಗನಯಾತ್ರಿಗಳನ್ನು ಏಳು ದಿನಗಳ ವರೆಗೆ ಬಾಹ್ಯಾಕಾಶಕ್ಕೆ ಕಳಿಸುತ್ತದೆ ಎಂದು ಘೋಷಿಸಿದ್ದರು. ಇದಕ್ಕಾಗಿ ಕೇಂದ್ರ ಸಂಪುಟ 10,000 ಕೋಟಿ ರೂ.ಮೀಸಲಿಡಲು ನಿರ್ಧರಿಸಿತ್ತು.
ಇದೇ ವೇಳೆ ಶಿವನ್ ಈ ವರ್ಷ ಏಪ್ರಿಲ್ ಮದ್ಯಭಾಗದಲ್ಲಿ ಭಾರತದ ಎರಡನೇ ಚಂದ್ರಯಾನ ಯೋಜನೆ ಚಂದ್ರಯಾನ -2 ಕಾರ್ಯಗತವಾಗಲಿದೆ ಎಂದು ಘೋಷಿಸಿದ್ದಾರೆ. ಇದು ಹತ್ತು ವರ್ಷಗಳ ಹಿಂದಿನ ಚಂದ್ರಯಾನ -1 ಕಾರ್ಯಾಚರಣೆಯ ಮುಂದುವರಿದ ಆವೃತ್ತಿಯಾಗಿದ್ದು ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಾಗುತ್ತಿದೆ.