ಪ್ರಯಾಗ್ ರಾಜ್ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್), ದೇವಸ್ಥಾನವನ್ನು 2025ಕ್ಕೆ ನಿರ್ಮಿಸಲಾಗುವುದು ಎಂದು ವ್ಯಂಗ್ಯವಾಗಿ ಹೇಳಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ವಿವಾದಗಳು ನಡೆಯುತ್ತಿರುವಾಗ ಹೇಳಿಕೆ ನೀಡಿರುವ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಬೈಯಾಜಿ ಜೋಷಿ, ರಾಮಮಂದಿರ 2025ರಲ್ಲಿ ನಿರ್ಮಾಣವಾದ ನಂತರ ದೇಶ ಪ್ರಗತಿಯಾಗುತ್ತದೆ ಎಂದಿದ್ದಾರೆ.
2025ರಲ್ಲಿ ರಾಮ ಮಂದಿರ ನಿರ್ಮಾಣ ಆರಂಭವಾದಾಗ ದೇಶ ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. 1952ರಲ್ಲಿ ಸೋಮನಾಥ ದೇವಾಲಯ ಕಟ್ಟಿದ ನಂತರ ದೇಶ ಕಂಡ ಪ್ರಗತಿ ರೀತಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ನಂತರ ದೇಶ ಪ್ರಗತಿ ಕಾಣಲಿದೆ ಎಂದು ಜೋಷಿ ಹೇಳಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದರೂ ಕೂಡ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಮೋದಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರ್ ಎಸ್ ಎಸ್ ಆರೋಪಿಸಿದೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ನಿರ್ಮಾಣ ವಿವಾದ ಕಳೆದ 8 ವರ್ಷಗಳಿಂದ ಸುಪ್ರೀಂ ಕೋರ್ಟ್ ಮುಂದಿದ್ದು ವಿಚಾರಣೆಯನ್ನು ಶೀಘ್ರ ಮುಗಿಸುವಂತೆ ಪಕ್ಷಗಳು ಮತ್ತು ಹಲವು ಬಲ ಪಂಥೀಯ ಸಂಘಟನೆಗಳು ಕೋರುತ್ತಿವೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ನಿರ್ಮಾಣ ವಿವಾದ ಕಳೆದ 8 ವರ್ಷಗಳಿಂದ ಸುಪ್ರೀಂ ಕೋರ್ಟ್ ಮುಂದಿದ್ದು ವಿಚಾರಣೆಯನ್ನು ಶೀಘ್ರ ಮುಗಿಸುವಂತೆ ಪಕ್ಷಗಳು ಮತ್ತು ಹಲವು ಬಲ ಪಂಥೀಯ ಸಂಘಟನೆಗಳು ಕೋರುತ್ತಿವೆ.
ನಾವು ಯಾವುದೇ ಸಮುದಾಯದ ಜೊತೆಗೂ ಸಂಘರ್ಷಕ್ಕೆ ಇಳಿದಿಲ್ಲ ಎಂದಿರುವ ಬಯ್ಯಾಜಿ, ಬೇರೆ ಸಮುದಾಯದ ಜೊತೆ ಸಂಘರ್ಷ ನಡೆಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ನಾವು ಏನನ್ನೂ ಬೇಡುತ್ತಿಲ್ಲ. ನಾವು ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ಸುಗ್ರೀವಾಜ್ಞೆ ಮೂಲಕ ಮಾತ್ರ ಮಂದಿರ ನಿರ್ಮಾಣ ಮಾಡಬಹುದಾಗಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಅಧಿಕಾರಕ್ಕೆ ಬಂದರೆ ರಾಮ ಮಂದಿರ ಕಟ್ಟುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮೋದಿ ಆಶ್ವಾಸನೆ ನೀಡಿದ್ದರು. ಆದರೆ, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ, ರಾಮ ಮಂದಿರ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಕೋರ್ಟ್‍ನಿಂದ ಬರುವ ಆದೇಶ ಆಧರಿಸಿ ಕೇಂದ್ರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮೋದಿ ಹೇಳಿದ್ದರು. ಈ ಬಗ್ಗೆ ಆರ್‍ಎಸ್ ಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಆರ್ ಎಸ್ ಎಸ್ ಆಗ್ರಹಿಸಿದೆ.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನಲ್ಲಿ 14 ಮನವಿಗಳು ವಿಚಾರಣೆಗೆ ಬಾಕಿ ಉಳಿದಿವೆ. ಇತ್ತೀಚೆಗೆ ರಾಮ ಜನ್ಮಭೂಮಿ ವಿವಾದವನ್ನು ಆಲಿಸಲು ಸುಪ್ರೀಂ ಕೋರ್ಟ್ ಜನವರಿ 29ಕ್ಕೆ ಮುಂದಿನ ವಿಚಾರಣೆ ದಿನಾಂಕವನ್ನು ನಿಗದಿಪಡಿಸಿತ್ತು.