ನವದೆಹಲಿ: ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈಗ ಮೀನ ಮೇಷ ಎಣಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ ಎಸ್ ಎಸ್) ಈ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲವೆಂದು ಹಿಂದೂ ಸಾಧು ಸಂತರು ಆಕ್ರೋಶಗೊಂಡಿದ್ದಾರೆ.
ನಿನ್ನೆ(ಬುಧವಾರ) ನಡೆದ ಹಿಂದೂ ಸಾಧು ಸಂತರ ಸಮಾವೇಶ ಪರಮಧರ್ಮ ಸಂಸದ್ ನಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನಗೊಂಡಿದ್ದರು. ಅಲ್ಲದೆ ಬಿಜೆಪಿಗೆ ಆರ್ ಎಸ್ ಎಸ್ ಗೆ ಕಾಯದೆ ತಾವೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಧರ್ಮ ಸಂಸದ್ ನಿರ್ಧರಿಸಿದೆ. ಸ್ವಾಮಿ ಸ್ವರೂಪಾನಂದ ಅವರಿಗೆ ಈ ಹೊಸ ಹೋರಾಟದ ನೇತೃತ್ವ ವಹಿಸಲಾಗಿದ್ದು ಸ್ವಾಮಿ ಸ್ವರೂಪನಂದ ಅವರು ಫೆಬ್ರವರಿ 21ರಂದು ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.
ಅಯೋಧ್ಯೆ ವಿವಾದಿತ ಜಾಗದ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಮಂದಿರ ನಿರ್ಮಾಣ ಕಾರ್ಯ ನಡೆಸಬಹುದು ಎಂಬುದು ಕೆಲ ಹಿಂದೂ ಸಂಘಟನೆಗಳ ಅಭಿಪ್ರಾಯ ಹಾಗೂ ಒತ್ತಾಯವಾಗಿದೆ. ಆದರೆ ಪ್ರಧಾನಿ ಮೋದಿ ಅವರು ಸುಪ್ರೀಂ ಕೋರ್ಟ್ ನಿಂದ ಅಂತಿಮ ತೀರ್ಪು ಬರುವವರೆಗೂ ಮಂದಿರ ನಿರ್ಮಾಣ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ನಡೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.