ಕಾಸರಗೋಡು: ವಿದ್ಯಾನಗರದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 22ನೇ ವಾರ್ಷಿಕೋತ್ಸವವು ಜ.20ರಂದು ಕಾಸರಗೋಡು ಲಲಿತ ಕಲಾ ಸದನದಲ್ಲಿ ನಡೆಯಲಿರುವುದು. ಬೆಳಿಗ್ಗೆ 9.30ಕ್ಕೆ ಎಡನೀರು ಮಠದ ಕಾರ್ಯದರ್ಶಿ ಜಯರಾಮ ಎಡನೀರು ಉದ್ಘಾಟಿಸುವರು. ಬಳಿಕ ಸಂಗೀತ ಶಾಲೆಯ ಗುರುಗಳಾದ ಉಷಾ ಈಶ್ವರ ಭಟ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ವಯಲಿನ್‍ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಡಾ.ಮಾಯಾ ಮಲ್ಯ ಕಾಸರಗೋಡು, ಮೃದಂಗದಲ್ಲಿ ಕೋವೈ ಕಣ್ಣನ್ ಕಾಂಞಂಗಾಡು, ರಾಜೀವ್ ಗೋಪಾಲ್ ವೆಳ್ಳಿಕೋತ್, ಟಿ.ಕೆ.ವಾಸುದೇವ ಕಾಂಞಂಗಾಡು ಸಹಕರಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಪ್ರಧಾನ ಕಚೇರಿಯಲ್ಲಿ ಅಮೃತಾ ವೆಂಕಟೇಶ್ ಬೆಂಗಳೂರು ಹಾಡುಗಾರಿಕೆಯಲ್ಲಿ, ವಯಲಿನ್‍ನಲ್ಲಿ ಎನ್.ಸಂಪತ್ ತಿರುವನಂತಪುರ, ಮೃದಂಗದಲ್ಲಿ ಮಹೇಶ್ ಕುಮಾರ್ ಪಾಲ್ಘಾಟ್, ಮೋರ್ಸಿಂಗ್‍ನಲ್ಲಿ ಗೋವಿಂದ ಪ್ರಸಾದ್ ಪಯ್ಯನ್ನೂರು ಸಹಕರಿಸಲಿದ್ದಾರೆ.
ಅಮೃತ ವೆಂಕಟೇಶ್ ಬೆಂಗಳೂರು ಇವರ ಬಗ್ಗೆ:
ಇವರು ಅಭಿಜಾತ ಸಂಗೀತ ಕಲಾವಿದೆ. ತನ್ನ ಆರನೆಯ ವಯಸ್ಸಿನಲ್ಲಿ ಪ್ರಬುದ್ಧ ಸಂಗೀತ ಕಚೇರಿಯನ್ನು ಸ್ವತಂತ್ರವಾಗಿ ನೀಡಿ ವಿದ್ವಾಂಸರುಗಳಿಂದ ಭೇಷ್ ಎಂದೆನಿಸಿಕೊಂಡವರು. ಬೆಂಗಳೂರಿನ ಸಂಗೀತ ಪರಂಪರೆಯ ಮನೆತನದಿಂದ ಬಂದಿರುವ ಇವರು ತನ್ನ ತಾಯಿ ರಾಧಾರವರಿಂದ ಆರಂಭಿಕ ಶಿಕ್ಷಣವನ್ನು ಪಡೆದು ಸೋದರಮಾವ ಮಾಧವನ್‍ರವರ ಗರಡಿಯಲ್ಲಿ ಅಭ್ಯಸಿಸಿದ್ದಾರೆ. ಪ್ರಸಿದ್ಧ ಸಂಗೀತಜ್ಞ ವಿದ್ವಾನ್ ಸೆಲ್ವ ನಾರಾಯಣರವರ ಶಿಷ್ಯತ್ವದಲ್ಲಿ ಹದಿನಾರು ವರ್ಷಗಳ ಪರ್ಯಂತ ಸತತ ಸಂಗೀತಾಧ್ಯಯನ ನಡೆಸಿದರು. ತದನಂತರ ಸಂಗೀತ ಗುರು ಚಾರುಮತಿ ರಾಮಚಂದ್ರನ್ ಮತ್ತು ಶ್ರೇಷ್ಠ ಸಂಗೀತಜ್ಞ ತಿರುವನಂತಪುರದ ರಾಜ ವಂಶಜ ಪ್ರಿನ್ಸ್ ರಾಮವರ್ಮರವರಲ್ಲಿ ವಿಶೇಷ ಅಧ್ಯಯನ ಮತ್ತು ತರಬೇತಿಯನ್ನು ಪಡೆದಿರುತ್ತಾರೆ. ಕರ್ನಾಟಕ ಸಂಗೀತ ಲೋಕದ ಪ್ರಸಿದ್ಧ ಯುವ ಕಲಾವಿದೆಯರಲ್ಲಿ ಒಬ್ಬರಾದ ಇವರು ಶ್ರೇಷ್ಠ ವೀಣಾ ವಾದಕಿಯೂ ಆಗಿದ್ದಾರೆ. ಅಲ್ಲದೇ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಹಾಡುಗಾರಿಕೆ ಮತ್ತು ವೀಣಾವಾದನದಲ್ಲಿ `ಎ' ಶ್ರೇಣಿಯ ಕಲಾವಿದೆ. ತನ್ನ ಗುರು ರಾಮವರ್ಮರವರೊಂದಿಗೆ ಸಹಗಾಯನ ಮತ್ತು ಹಲವಾರು ಧ್ವನಿಮುದ್ರಿಕೆ, ಆಲ್ಬಮ್, ಅಂತೆಯೇ 600ಕ್ಕೂ ಮಿಕ್ಕಿದ ಜನಾಕರ್ಷಣೆಯ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿ ಪ್ರಸಿದ್ಧರಾಗಿದ್ದಾರೆ. ಪ್ರಸಿದ್ಧ ಹಾಡುಗಾರ್ತಿ ಪಾರಶಾಲ ಪೆÇನ್ನಮ್ಮಾಳರವರ ನಂತರ ತನ್ನ 20ನೆಯ ವಯಸ್ಸಿನಲ್ಲಿ ತಿರುವನಂತಪುರ ಆಸ್ಥಾನದ ನವರಾತ್ರಿ ಮಂಟಪದಲ್ಲಿ ಸಂಗೀತ ಕಚೇರಿ ನೀಡಿದ ಹೆಗ್ಗಳಿಕೆ ಇವರಿಗಿದೆ. ಸಂಗೀತ ವಿಮರ್ಷಕ ಮತ್ತು ವಿದ್ವಾಂಸರುಗಳಿಂದ ಪ್ರಶಂಶಿಸಲ್ಪಟ್ಟ ಇವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಂದ ಸಮ್ಮಾನಿಸಲ್ಪಟ್ಟಿದ್ದಾರೆ.
ಸಂಗೀತ ಅಕಾಡೆಮಿ ಚೆನ್ನೈ, ಸ್ಪಿರಿಟ್ ಆಫ್ ಯೂತ್-2006, 2013ರಲ್ಲಿ ಎಂ.ಎಸ್. ಸುಬ್ಬಲಕ್ಷ್ಮೀ ಪುರಸ್ಕಾರ-ಕೃಷ್ಣಗಾನ ಸಭಾ ಚೆನ್ನೈ, 2016ರಲ್ಲಿ ಇಂದಿರಾನಗರ ಸಂಗೀತ ಸಭೆ ಬೆಂಗಳೂರು ಇವರಿಂದ ಪ್ರತಿಷ್ಠಿತ ಯುವ ಪುರಂದರ ಪುರಸ್ಕಾರಗಳು ಹಾಗೂ ಇನ್ನಿತರೆಡೆಗಳಲ್ಲಿ ಅನೇಕ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ. 2008ರಲ್ಲಿ `ತುಳಸಿ' ಆಲ್ಬಮ್, 2009ರಲ್ಲಿ ನರಸಿಂಹ ಸಂಗೀತ ಗುಚ್ಛ, 2011ರಲ್ಲಿ ರಾಮಾಯಣ, 2012ರಲ್ಲಿ ದೇವಿ ಕೃತಿಗಳೆಂಬ ಸಂಗೀತ ಮಾಲಿಕೆಗಳಲ್ಲಿ ಹಾಡಿ ಪ್ರಸಿದ್ಧರಾಗಿದ್ದಾರೆ.