ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರಿಗೆ 24x7 ಭದ್ರತೆ ಕೊಡುವಂತೆ ಕೇರಳ ಪೊಲೀಸರಿಗೆ ಸುಪ್ರೀಂಕೋರ್ಟ್ ನಿನ್ನೆ ತಾಕೀತು ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಮತ್ತು ನ್ಯಾಯಾಧೀಶರಾದ ಎಲ್.ಎನ್. ರಾವ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ಈ ಇಬ್ಬರು ಮಹಿಳೆಯರಿಗೆ ಮಾತ್ರ ಈ ರೀತಿಯ ಭದ್ರತೆ ನೀಡಬೇಕು, ಇತರ ಯಾವುದೇ ಭಕ್ತಾಧಿಗಳು ಮನರಂಜನೆಗಾಗಿ ಈ ರೀತಿಯ ಅರ್ಜಿ ಸಲ್ಲಿಸುವಂತಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.
ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳೊಂದಿಗೆ ಈ ವಿಚಾರ ತಳಕು ಹಾಕುವುದಕ್ಕೆ ನ್ಯಾಯಪೀಠ ನಿರಾಕರಿಸಿದೆ.
10 ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ ಮೂರು ತಿಂಗಳ ಬಳಿಕ ಪೊಲೀಸರ ಭದ್ರತೆಯೊಂದಿಗೆ ಬಿಂದು ಹಾಗೂ ಕನಕಾ ದುರ್ಗ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.
ಇತ್ತೀಚಿಗೆ ಕನಕಾದುರ್ಗಾ ತನ್ನ ಪತಿಯ ಮನೆಗೆ ವಾಪಾಸ್ಸಾದಾಗ ಆಕೆಯ ಅತ್ತೆಯಿಂದಲೇ ಹಲ್ಲೆ ನಡೆದಿತ್ತು. ಈ ಸಂಬಂಧ ರಕ್ಷಣೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.