ಬದಿಯಡ್ಕ : ವಿಶ್ವಕರ್ಮ ಸಾಹಿತ್ಯ ದರ್ಶನದ ನೇತೃತ್ವದಲ್ಲಿ ಜ. 26, 27ಕ್ಕೆ ಬದಿಯಡ್ಕದಲ್ಲಿ ವಿಶ್ವದರ್ಶನ ದ್ವಿದಿನ ಸಮ್ಮೇಳನ ಜರಗಲಿದೆ. ಸಾಹಿತ್ಯೋತ್ಸವ ಹಾಗೂ ಸಾಂಸ್ಕøತಿಕೋತ್ಸವ ಎಂಬ ದ್ವಿದಿನ ಸಮ್ಮೇಳನದಲ್ಲಿ ವಿವಿಧ ಸಾಹಿತಿಗಳು, ಮಾಧ್ಯಮ ರಂಗದವರು, ಲೇಖಕರು, ಕವಿ-ಕವಯತ್ರಿಯರು ಹಾಗೂ ಸಾಂಸ್ಕøತಿಕ ರಂಗದ ಚಲನಚಿತ್ರ, ಕಿರುತೆರೆ, ನಾಟಕ ಕಲಾವಿದರು, ಚಿತ್ರಕಲಾ ರಚನೆಗಾರರು, ಧಾರ್ಮಿಕ-ಸಾಮಾಜಿಕ, ವಿವಿಧ ಸಮುದಾಯ ಹೀಗೆ ವಿವಿಧ ರಂಗದ ಹಿರಿಯ-ಕಿರಿಯರನ್ನು ಸೇರಿಸಿಕೊಂಡು ವಿಶ್ವದರ್ಶನ ಎಂಬ ವೈಶಿಷ್ಟ್ಯಮಯ ಹೆಸರನ್ನಿರಿಸಲಾಗಿದೆ. ಈ ದ್ವಿದಿನ ಸಮ್ಮೇಳನಕ್ಕೆ ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ರಂಗದ ಸವ್ಯಸಾಚಿ ಎಂಬ ನೆಲೆಯಲ್ಲಿ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಇವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ವಕರ್ಮ ಸಹಿತ ವಿವಿಧ ಸಮಾಜದ ಸಾಹಿತ್ಯ ಸಾಂಸ್ಕøತಿಕ, ಸಾಮಾಜಿಕ ಗಣ್ಯರು ವಿಶ್ವದರ್ಶನದಲ್ಲಿ ಸಹಭಾಗಿಗಳಾಗಿದ್ದಾರೆ.
ಗಣೇಶ್ ಕಾಸರಗೋಡು ಅವರ ಬಗ್ಗೆ:
ಮೂಲತಃ ಕಾಸರಗೋಡಿನವರಾದ ಗಣೇಶ್ ಸಿನಿಮಾ ಪತ್ರಕರ್ತರಾಗಿ ಅಖಿಲ ಕರ್ನಾಟಕದಲ್ಲಿ ಪ್ರಸಿದ್ಧರಾದವರು. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಎಂ. ಎ. ಮುಗಿಸಿ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇವರು ನಂತರ ಕರ್ನಾಟಕದ ಜನಪ್ರಿಯ ಪತ್ರಿಕೆ ವಿಜಯ ಕರ್ನಾಟಕದಲ್ಲಿ, ಸಂಯುಕ್ತ ಕರ್ನಾಟಕ, ಕರ್ಮವೀರ, ಹಾಯ್ ಬೆಂಗಳೂರು, ಮಂಗಳ, ಆಂದೋಲನ, ಅರಗಿಣಿ, ಚಿತ್ರತಾರಾ, ಚಿತ್ರದೀಪ, ಟೈಮ್ಸ್ ಆಫ್ ಕರ್ನಾಟಕದಲ್ಲಿ ಸಿನಿಮಾ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಚದುರಿದ ಚಿತ್ರಗಳು, ಮೌನ ಮಾತಾದಾಗ, ನೂರು ಚಿತ್ರಗಳು ನೂರಾರು ನೆನಪುಗಳು, ಆಫ್ ದಿ ರೆಕಾರ್ಡ್, ಗುರಿ ಹೆಗ್ಗುರಿ, ಚಿಗುರಿದ ಕನಸುಗಳು, ಪ್ರೀಮಿಯರ್ ಬಸವರಾಜ್, ಅಭಿಮಾನದ ಬಾಲಣ್ಣ, ಕನ್ನಡದ ಕಣ್ಮಣಿಗಳು, ಹೇಗಿದ್ದ ಹೇಗಾದ ಗೊತ್ತಾ? ಹುಲಿಕಲ್ ನಟರಾಜ್, ಅಂತರಂಗ - ಬಹಿರಂಗ ದರ್ಶನ, ಕ್ರೇಜಿಸ್ಟಾರ್ ರವಿಚಂದ್ರನ್, ನೆನಪಿನಂಗಳದಲ್ಲಿ ಶಂಕರ್ ನಾಗ್, ಬದುಕು ಮುಗಿಸುವ ಮುನ್ನ ಇವರು ಬರೆದಂತಹ ಜನಪ್ರಿಯ ಕೃತಿಗಳಾಗಿವೆ. ಇವರ ಚದುರಿದ ಚಿತ್ರಗಳು ಕೃತಿಗೆ ಕರ್ನಾಟಕ ಚಲನಚಿತ್ರ ಮಾಧ್ಯಮ ಪ್ರಶಸ್ತಿ ಲಭಿಸಿದೆ.