ದುಬೈ: ಕೇರಳದ ಶರತ್ ಪುರುಷೋತ್ತಮಾನ್ ಎಂಬುವವರು ದುಬೈನ ಬಿಗ್ ಟಿಕೆಟ್ ರಾಫೆಲ್ ಲಾಟರಿಯಲ್ಲಿ ಬರೋಬ್ಬರಿ 28 ಕೋಟಿ ರುಪಾಯಿ(15 ಮಿಲಿಯನ್ ಯುಎಇ ಧಿರ್ಹಾಮ್ಸ್) ಗೆದ್ದುಕೊಂಡಿದ್ದಾರೆ.
ಅಚ್ಚರಿ ಎಂದರೆ, ಲಾಟರಿ ಗೆದ್ದಿರುವ ಟಾಪ್ 10ರಲ್ಲಿ ಎಂಟು ಮಂದಿ ಭಾರತೀಯರಿದ್ದು, ಈ ಪೈಕಿ ಆರು ಜನ ಕೇರಳದವರಾಗಿದ್ದಾರೆ.
ವರದಿಗಳ ಪ್ರಕಾರ, ಗುರುವಾರ ಬೆಳಿಗ್ಗೆ ದುಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಟರಿ ಎತ್ತಲಾಗಿದ್ದು, 083733 ನಂಬರಿನ ಟಿಕೆಟ್ ಬಿಗ್ ಟಿಕೆಟ್ ರಾಫೆಲ್ ಲಾಟರಿ ಗೆದ್ದುಕೊಂಡಿದೆ.
083733 ನಂಬರಿನ ಟಿಕೆಟ್ ಹೊಂದಿದ್ದ ಶರತ್ ಅವರಿಗೆ, ನಿಮಗೆ 28 ಕೋಟಿ ರುಪಾಯಿ ಲಾಟರಿ ಹೊಡೆದಿದೆ ಎಂದು ಹೇಳಿದರೆ, ನಂಬಲು ಸಿದ್ಧರಿಲ್ಲದ ಅವರು, ಸರಿ, ನಾನು ವೆಬ್ ಸೈಟ್ ನಲ್ಲಿ ಪರಿಶೀಲಿಸಿ ಹೇಳುತ್ತೇನೆ ಎಂದರು.
ನೀವು 15 ಮಿಲಿಯನ್ ಧಿರ್ಹಾಮ್ಸ್ ಗೆದ್ದಿದ್ದೀರಾ, ಏನು ಅನಿಸುತ್ತಿದ್ದೆ ಎಂದು ಲಾಟರಿ ಸಂಘಟಕರು ಕೇಳಿದರೆ, ಯಾವುದೇ ಉದ್ವೇಗಕ್ಕೆ ಒಳಗಾಗದ ಶರತ್ ಬರೀ ಓಕೆ ಎಂದಷ್ಟೇ ಹೇಳಿದ್ದಾರೆ.
ನಂತರ, ನಾನು ನನ್ನ ಸ್ನೇಹಿತರೊಂದಿಗೆ ಸೇರಿ ಬಿಗ್ ಟಿಕೆಟ್ ಖರೀದಿಸಿದ್ದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಟಿಕೆಟ್ ಖರೀದಿಸುತ್ತಿದ್ದೆ ಎಂದು ಶರತ್ ತಿಳಿಸಿದ್ದಾರೆ.