ನವದೆಹಲಿ: ಮುಂದಿನ ತಿಂಗಳು ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣೆಯಾಗುವ ಸಾಧ್ಯತೆ ಇದೆ. ಫೆಬ್ರವರಿ ತಿಂಗಳಲ್ಲಿ ಉಡಾವಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ತಿಂಗಳು ಮಧ್ಯಭಾಗದಲ್ಲಿ ಚಂದ್ರಯಾನ-2 ಉಡಾವಣೆಯಾಗುವ ಸಾಧ್ಯತೆ ಇದೆ. ಆದರೆ, ದಿನಾಂಕದ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಅರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಗಳನ್ನೊಳಗೊಂಡ ಚಂದ್ರಯಾನ-2 ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ. ಬಾಹ್ಯಾಕಾಶ ನೌಕೆ ಮೂಲಕ ರೋವರನ್ನು ಚಂದ್ರನ ಕಕ್ಷೆ ಮೇಲೆ ಇಳಿಸಲಾಗುತ್ತದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಚಕ್ರದ ರೋವರ್ ಚಂದ್ರನ ಕಕ್ಷೆಯಲ್ಲಿ ಸುತ್ತುವ ಮೂಲಕ ದತ್ತಾಂಶಗಳನ್ನು ಕಳುಹಿಸುತ್ತದೆ ಇದರಿಂದಾಗಿ ಚಂದ್ರನ ಮೇಲಿನ ಮಣ್ಣಿನ ಬಗ್ಗೆ ವಿಶ್ಲೇಷಣೆ ಮಾಡಲು ಸಾಧ್ಯವಾಗಲಿದೆ.
3.290 ಕೆಜಿ ತೂಕದ ಚಂದ್ರಯಾನ- 2 ಉಡಾವಣೆಯಿಂದ ಚಂದ್ರನ ಮೇಲ್ಮೆ ಲಕ್ಷಣ, ಖನಿಜಾಂಶಗಳು, ನೀರು, ಮತ್ತಿತರ ಅಂಶಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಸಂಗ್ರಹಿಸಬಹುದಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಹಿಂದೆ 2008 ಅಕ್ಟೋಬರ್ ತಿಂಗಳಲ್ಲಿ ಇಸ್ರೋದಿಂದ ಚಂದ್ರಯಾನ-1 ಉಡಾವಣೆ ಮಾಡಲಾಗಿತ್ತು. ಅದು 2009 ಆಗಸ್ಟ್ ತಿಂಗಳವರೆಗೂ ಕಾರ್ಯಾಚರಣೆ ನಡೆಸಿತ್ತು.