ಪೆರ್ಲ: ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಸೌಕರ್ಯವಾಗಿ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ನಿರ್ಮಿಸಿದ ಸಾಯಿಪ್ರಸಾದ ವಸತಿಗಳನ್ನು ಶೀಘ್ರದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ. ಪೆರ್ಲದ ಸಾಯಿಗ್ರಾಮದಲ್ಲಿ ಒಟ್ಟು 36 ಕುಟುಂಬಗಳಿಗೆ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನೀಡಲಾಗುತ್ತಿದೆ.
ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆರ್ಲದಲ್ಲಿ ಈ ಹಿಂದೆ ರಾಜ್ಯ ಸರಕಾರವು ನೀಡಿದ್ದ ಐದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಸಾಯಿಪ್ರಸಾದ ವಸತಿಗಳು ಸಿದ್ಧಗೊಂಡಿವೆ. ಇರಿಯಾ ಕಾಟ್ಟುಮಾಡಂ ಸಾಯಿಗ್ರಾಮದಲ್ಲಿ ಮೊದಲ ಘಟ್ಟದಲ್ಲಿ ಒಟ್ಟು 36 ಎಂಡೋ ಸಂತ್ರಸ್ತ ಕುಟುಂಬಗಳಿಗೆ ಆಶ್ರಯ ನೀಡಲಾಗಿತ್ತು. ಹೆಚ್ಚುವರಿ ಒಂಭತ್ತು ಮನೆಗಳ ನಿರ್ಮಾಣ ಕೊನೆ ಹಂತದಲ್ಲಿದ್ದು ಎಂಡೋ ಕುಟುಂಬಗಳಿಗೆ ಇಲ್ಲಿ ಆಶ್ರಯ ನೀಡಲಾಗುವುದು ಎನ್ನಲಾಗಿದೆ.
ಬಡ್ಸ್ ಶಾಲೆ, ಆಯುಷ್ ಹೋಲಿಸ್ಟಿಕ್ ಸೆಂಟರ್, ಕುಡಿನೀರು ಯೋಜನೆಗಳು ಇಲ್ಲಿವೆ. 500 ಚದರ ಅಡಿ ಇರುವ ಸುಸಜ್ಜಿತ ಮನೆಗಳು ಪೆರ್ಲದಲ್ಲಿ ಸಜ್ಜುಗೊಂಡಿವೆ. ಒಂದು ಮನೆಯಲ್ಲಿ ಎರಡು ಕೊಠಡಿ, ಒಂದು ಅಡುಗೆ ಕೋಣೆ ಸಹಿತ ವರಾಂಡವಿದೆ. ಸಾಯಿಗ್ರಾಮದಲ್ಲಿ ಮಕ್ಕಳಿಗಾಗಿ ಪಾರ್ಕ್, ಸೌರ ವಿದ್ಯುತ್ ಘಟಕ, ಮಾನಸಿಕ ತೊಂದರೆ ಅನುಭವಿಸುವ ಮಕ್ಕಳಿಗಾಗಿ ವಿಶೇಷ ವಿದ್ಯಾಲಯ, ಹೊರಾಂಗಣ ರಂಗಸ್ಥಳ, 30 ಸಾವಿರ ಲಿ. ನೀರಿನ ಟ್ಯಾಂಕ್ ವ್ಯವಸ್ಥೆ ಇದೆ. ಗ್ರಾಮೀಣ ಪ್ರದೇಶದಲ್ಲಿರುವ ಸಾಯಿಪ್ರಸಾದ ಪುನರ್ವಸತಿ ಕೇಂದ್ರದ ಮನೆಗಳು ಎಂಡೋ ಸಂತ್ರಸ್ತರಿಗೆ ಅನುಗ್ರಹವಾಗಿದೆ. ಜಿಲ್ಲಾಡಳಿತವು ಸೂಕ್ತ ಫಲಾನುಭವಿಗಳನ್ನು ಆರಿಸಿ ಇಲ್ಲಿ ತಂಗಲು ಅನುಮತಿಸಲಿದೆ. ಸಾಯಿ ಟ್ರಸ್ಟ್ ಸಂಸ್ಥಾಪಕ ಹಾಗೂ ಪ್ರಧಾನ ನಿರ್ದೇಶಕ ಕೆ.ಎನ್ ಆನಂದ ಕುಮಾರ್, ರಾಜ್ಯ ಸಂಯೋಜಕ ಅಡ್ವ.ಕೆ.ಮಧುಸೂದನ್ ಮೊದಲಾದವರು ಈ ಯೋಜನೆಗೆ ನೇತೃತ್ವ ವಹಿಸಿದ್ದಾರೆ. ಜೋಯ್ ಅಲುಕ್ಕಾಸ್ ಸಂಸ್ಥೆಯ ಸಹಕಾರದೊಂದಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಸಾಯಿಗ್ರಾಮದ ಮೂರನೇ ಘಟ್ಟವು ಕಿನಾನೂರು-ಕರಿಂದಲಂ ಗ್ರಾಮ ಪಂಚಾಯತಿನಲ್ಲಿ ಆರಂಭಗೊಳ್ಳಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಕಿನಾನೂರಿನಲ್ಲಿ ವಸತಿ ನಿರ್ಮಾಣವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಲಾಗಿದೆ.