ಉಪ್ಪಳ: ಭಾವೈಕ್ಯತೆ ಹಾಗೂ ಸೌಹಾರ್ಧತೆಗೆ ಹೆಸರಾಗಿರುವ ಜೋಡುಕಲ್ಲಿನ ಮುಕುಟಕ್ಕೆ ಕಿರೀಟವಿಟ್ಟಂತೆ ಶೋಭಿಸುತ್ತಿರುವ ಜನಾರ್ಧನ ಕಲಾವೃಂದ ಸಂಸ್ಥೆ ಕಲೆ,ಸಾಹಿತ್ಯ, ಸಾಂಸ್ಕøತಿಕ ಹಾಗೂ ಸಾಮಾಜಿಕ ವಲಯದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯ. ಜಾತಿ, ಮತ, ರಾಜಕೀಯದ ಬೇಲಿಯನ್ನು ದಾಟಿ ನಾವೆಲ್ಲರೂ ಒಂದೇ ಎಂಬ ಸೌಹಾರ್ಧತೆಯಿಂದ 38ವರ್ಷಗಳನ್ನು ದಾಟಿಬಂದಿದೆಯೆಂದರೆ ಅದೊಂದು ಅಮೋಘ ಸಾಧನೆಯೆ ಸರಿ. ಇಂದೀಗ ಅಚ್ಚುಕಟ್ಟಾದ, ಆಕರ್ಷಕವಾದ, ಹವಾನಿಯಂತ್ರಿತ ಕಟ್ಟಡವನ್ನು ನಿರ್ಮಿಸುವುದರೊಂದಿಗೆ ಲೋಕಕ್ಕೆ ಒಗ್ಗಟ್ಟಿನ, ಸೌಹಾರ್ಧತೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಮುಂದೆಯೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳುವತ್ತ ತನ್ನ ಆದರ್ಶಗಳೊಂದಿಗೆ ಹೆಜ್ಜೆಹಾಕಲಿ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಜೋಡುಕಲ್ಲು ಆದರ್ಶ ನಗರದ ಜನಾರ್ದನ ಕಲಾವೃಂದದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸಮಾನ ಮನಸ್ಕತೆ ಹಾಗೂ ಸೌಹಾರ್ಧತೆ ಯಾವುದೇ ಸಂಘಟನೆಯ ಉನ್ನತಿಗೆ ಕಾರಣವಾಗುತ್ತದೆ. ಒಗ್ಗಟ್ಟು ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾದ ರೀತಿಯಲ್ಲಿ ಒಂದೇ ಮನಸಿನಿಂದ, ಉತ್ತಮ ವಿಚಾರಧಾರೆಗಳೊಂದಿಗೆ ಸಂಘಟಿತರಾಗುವುದನ್ನು ರೂಢಿಸಿಕೊಂಡಾಗ ಮಾತ್ರ ನಮ್ಮಲ್ಲಿ ನಿಜವಾದ ಸಾರ್ಥಕತೆ ಮೂಡಲು ಸಾಧ್ಯ. ವೈವಿಧ್ಯಮಯ ವರ್ಣಗಳಲ್ಲಿ ಹೊರಸೂಸುವ ಬೆಳಕಿನ ಕಿರಣಗಳು ಬೀರುವ ಫ್ರಭೆ ಸಮಾನವಾಗಿ ಪ್ರಜ್ವಲಿಸುವಂತೆ ನಮ್ಮೊಳಗಿನ ಏಕತೆ, ಸಮರ್ಪಣಾ ಮನೋಭಾವ ಮತ್ತು ಸತ್ಚಿಂತನೆಗಳು ಎಂದೂ ಪ್ರಕಾಶಿಸುತ್ತಿರಬೇಕು. ಸ್ಥಳಿಯ ಸಂಘಟನೆಗಳು ಊರ ಪ್ರತಿಭೆಗಳಿಗೆ ದಾರಿದೀಪವಾಗುತ್ತವೆ. ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರನ್ನು, ಸಾಧಕರನ್ನು ಹೊರಪ್ರಪಂಚಕ್ಕೆ ಪರಿಚಯಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಆದುದರಿಂದ ಸುಸಜ್ಜಿತವಾದ ಕಲಾವೃಂದವು ಮಾಡಿರುವ ಸಾಧನೆ ಅಪಾರವಾದುದು. ಮುಂದೆಯೂ ಸಮಾಜಮುಖಿಯಾದ ವಿಚಾರಧಾರೆಗಳೋಂದಿಗೆ ಮುನ್ನಡೆಯಲಿ. ಹಾಗೆಯೇ ನಮ್ಮ ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ದೇಶ. ಕನ್ನಡಿಗರ ಮನಸು ಕೂಡಾ ಇದನ್ನೇ ಪ್ರತಿಪಾದಿಸುತ್ತದೆ. ಕಾಸರಗೋಡಿನ ಕನ್ನಡಿಗರ ವಿಶಾಲ ಮನಸ್ಕತೆ, ಒಗ್ಗಟ್ಟು, ಭಾಷೆ ಸಂಸ್ಕøತಿ, ಸಂಪ್ರದಾಯಗಳ ಕುರಿತಾದ ಗೌರವ ಹಾಗೂ ಜಾಗೃತಿ ಮೆಚ್ಚತಕ್ಕದ್ದು ಎಂದು ಅವರು ಹೇಳಿದರು.
ಜನಾರ್ದನ ಕಲಾವೃಂದದ ಅಧ್ಯಕ್ಷ ಲಕ್ಷ್ಮಣ ಮಡಂದೂರು ಅಧ್ಯಕ್ಷತೆವಹಿಸಿದ್ದರು. ಸಯ್ಯದ್ ಪೂಕೋಯ ತಂಙಳ್ ಕಯ್ಯಾರು ಹಾಗೂ ಸ್ನೇಹಾಲಯದ ಸ್ಥಾಪಕ ಜೋಸೆಫ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧ ಯೋಜನೆಯ ಯೋಜನಾಧಿಕಾರಿ ಚೇತನ ಎಂ, ಬ್ಲಾಕ್ ಪಂಚಾಯತು ಸದಸ್ಯ ಪ್ರಸಾದ್ ರೈ ಕಯ್ಯಾರು, ಪೈವಳಿಕೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ತ್ ಸುಹರ, ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ಉಮೇಶ್ ಶೆಟ್ಟಿ, ಮೀಂಜ ಗ್ರಾಮ ಪಂಚಾಯತು ಸದಸ್ಯೆ ಶಾಲಿನಿ.ಬಿ.ಶೆಟ್ಟಿ, ಕೇರಳ ಸರಕಾರದ ಕೆಂಬೆಲ್ ನಿರ್ದೇಶಕ ಅಬ್ದುಲ್ ರಝಾಕ್ ಚಿಪ್ಪಾರು, ಕೇರಳ ರಾಜ್ಯ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಙಳ್ ಉದ್ಯಾವರ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಕಯ್ಯಾರು ಶ್ರೀಜನಾರ್ಧನ ದೇವಸ್ಥಾನದ ಮೊಕ್ತೇಸರ ಪ್ರಭಾಕರ ಆಳ್ವ ಪಿಲಿಯಂದೂರು, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಧರ ಹೊಳ್ಳ ಕಯ್ಯಾರು, ಸಮಾಜ ಸೇವಕ, ಪತ್ರಕರ್ತ ಎ.ಬಿ. ಕುಟ್ಟಿಯಾನಮ್, ಭಾರತೀಯ ಕಬಡ್ಡಿ ತಂಡದ ಮಾಜಿ ಸಹ ನೇತಾರ ಕ್ಯಾಪ್ಟನ್. ಭಾಸ್ಕರ ರೈ ಮಂಜಲ್ತೊಡಿ, ಮಹಾಬಲ ಶೆಟ್ಟಿ ಗುಂಡಿಬೈಲು, ನಾರಾಯಣ ಬಂಗೇರ ಜೋಡುಕಲ್ಲು, ತಿಮ್ಮಪ್ಪ ಮಾಸ್ತರ್ ಜೋಡುಕಲ್ಲು, ಹಕೀಮ್, ಇಬ್ರಾಹಿಂ ಮಮ್ಮಞÂ ಕೆಕೆ ನಗರ ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಹಾಗೂ ಜನಾರ್ದನ ಕಲಾವೃಂದದ ಹಿರಿಯ ಸದಸ್ಯರನ್ನು ಸಮ್ಮಾನಿಸಿ ಗೌರವಿಸಲಾಯಿತು. ಶಿವಶಂಕರ್ ಸ್ವಾಗತಿಸಿ, ಜನಾರ್ಧನ ಕಲಾವೃಂದದ ಉಪಾಧ್ಯಕ್ಷ ಝಡ್.ಎ.ಕಯ್ಯಾರು ವಂದಿಸಿದರು.
ಬಳಿಕ ಗ್ರಾಮೀಣ ಕ್ರೀಡೆಗಳ ಭಾಗವಾಗಿ ಹಗ್ಗಜಗ್ಗಾಟ ಪ್ರೀಮಿಯರ್ ಲೀಗ್ ಸೀಸನ್-3ಯಲ್ಲಿ 16 ತಂಡಗಳು ಪಾಲ್ಗೊಂಡು ತೀವ್ರ ಪೈಪೋಟಿ ನೀಡಿದರು. ಕುತೂಹಲಕಾರಿಯಾಗಿ ನೋಡುಗರನ್ನು ಆಸಕ್ತಿಯ ಉತ್ತುಂಗಕ್ಕೇರಿಸಿದ ಸ್ಪರ್ಧೆಯಲ್ಲಿ ಐಂ.ಎಫ್.ಸಿ ಮಂಗಳಿಮಾರ್ ಪ್ರಥಮ, ಭಜರಂಗಿ ಫ್ರೆಂಡ್ಸ್ ಕಲ್ಪನೆ ದ್ವಿತೀಯ, ಶ್ರೀ ಮುತ್ತಪ್ಪನ್ ಜೋಡುಕಲ್ಲು ತೃತೀಯ ಹಾಗೂ ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಚತುರ್ಥ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.