ಕುಂಬಳೆ: ಯಕ್ಷದ್ರುವ ಪಟ್ಲ ಫೌಂಡೇಶನ್ ಸಮಗ್ರ ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳನ್ನು ಕೇಂದ್ರವಾಗಿರಿಸಿ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪಟ್ಲ ಪೌಂಡೇಶನ್ ಮೂಲಕ ಈಗಾಗಲೇ 3 ಕೋಟಿಗಳ ನೆರವನ್ನು ಆರ್ತ ಕಲಾವಿದರಿಗೆ ನೆರವಿನ ರೂಪದಲ್ಲಿ ನೀಡಲಾಗಿದೆ. ಇಬ್ಬರು ಅಶಕ್ತ ನಿವೇಶನ ರಹಿತ ಕಲಾವಿದರಿಗೆ ಸೂರು ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ನಿರ್ದೇಶಕ, ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿ ತಿಳಿಸಿದರು.
ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಕೊನೆಯ ದಿನವಾದ ಶುಕ್ರವಾರ ಸಂಜೆ ಕಣಿಪುರ ಶ್ರೀಕ್ಷೇತ್ರದ ಸಾಂಸ್ಕøತಿಕ ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕ ಆಯೋಜಿಸಿದ್ದ ಘಟಕದ ಮೂರನೇ ವಾರ್ಷಿಕೋತ್ಸವ, ಯಕ್ಷ ಗಾನ ವೈಭವದ ಭಾಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಲಾವಿದರ ಎಲ್ಲಾ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಫೌಂಡೇಶನ್ ಇನ್ನಷ್ಟು ಸೇವಾ ಚಟುವಟಿಕೆ ನಿರ್ವಹಿಸಲು ಉತ್ಸುಕವಾಗಿದೆ. ಯಕ್ಷಗಾನಕ್ಕೆ ಹೊಸ ಪೀಳೀಗೆ ತೋರ್ಪಡಿಸುತ್ತಿರುವ ಉತ್ಸಾಹ ಸ್ತುತ್ಯರ್ಹವಾಗಿದೆ. ಜೊತೆಗೆ ಕಲಾವಿದರ ಸಂಕಷ್ಟಗಳಿಗೆ ಧ್ವನಿಯಾಗುವಲ್ಲಿ ಆಸಕ್ತರಾಗಬೇಕಾಗಿರುವುದು ಕರ್ತವ್ಯ ಎಂದು ಅವರು ತಿಳಿಸಿದರು.
ಪಟ್ಲ ಫೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ ಸಮಾರಂಭವನ್ನು ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಾಧವ ಅಡಿಗಳು ದೀಪಬೆಳಗಿಸಿ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಸದಸ್ಯರಾದ ಸುಖೇಶ್ ಭಂಡಾರಿ,ಸುಜಿತ್ ರೈ,ಅರುಣಾ ಎಂ.ಆಳ್ವ ಮತ್ತು ಪುಷ್ಪಲತಾ ಸುರೇಶ್,ಐಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಕ್ಷೇತ್ರ ನಿರ್ವಹಣಾಧಿಕಾರಿ ಎಂ.ಟಿ.ರಾಮನಾಥ ಶೆಟ್ಟಿ ,ಸುದೇಶ್ ರೈ ಸಿ.ಎ ಅತಿಥಿಗಳಾಗಿ ಭಾಗವಹಿಸಿದರು.
ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್‍ರವರನ್ನು ಸಮ್ಮಾನಿಸಲಾಯಿತು. ಕೀರ್ತಿಶೇಷ ಮೇರು ಭಾಗವತರಾಗಿದ್ದ ಪುತ್ತಿಗೆ ತಿಮ್ಮಪ್ಪ ರೈ ಮತ್ತು ಎರ್ಮನಿಲೆ ನಾರಾಯಣ ಶೆಟ್ಟಿಯವರ ಸಂಸ್ಮರಣೆಯನ್ನು ಪಟ್ಲಗುತ್ತು ಮಹಾಬಲ ಶೆಟ್ಟಿ ಮಾಡಿದರು.
ಹಿರಿಯ ಭಾಗವತ ಪುತ್ತಿಗೆಗುತ್ತು ತಿಮ್ಮಪ್ಪ ರೈ ಅವರ ಅಶಕ್ತ ಪತ್ನಿ ಕುಸುಮಾ ರೈ ಅವರಿಗೆ ಆರ್ಥಿಕ ನೆರವನ್ನು ಈ ಸಂದರ್ಭ ನೀಡಲಾಯಿತು. ರೋಹಿಣಿ ಎಸ್.ದಿವಾಣ ಪ್ರಾರ್ಥನೆ ಹಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಸ್ವಾಗತಿಸಿ, ಮಂಜುನಾಥ ಆಳ್ವ ಮಡ್ವ ವಂದಿಸಿದರು. ಮಧೂರು ರಾಧಾಕೃಷ್ಣ ನಾವಡ ಸಮ್ಮಾನಿತರ ಕುರಿತು ಅಭಿನಂದನಾ ಭಾಷಣ ಮಾಡಿದರು. ರಾಘವೇಂದ್ರ ಪ್ರಸಾದ್ ನಾಯಕ್ ಬದಿಯಡ್ಕ ನಿರೂಪಿಸಿದರು.ಪಾಂಡವಾಸ್ ಕುಂಬಳೆ ಕಂಚಿಕಟ್ಟೆ ಸಹಕಾರ ನೀಡಿತ್ತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ತೃತೀಯ ವಾರ್ಷಿಕೋತ್ಸವವು ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಮಹೋತ್ಸವದ ಆರಾಟ ದಿನದಂದು ಕ್ಷೇತ್ರ ವಠಾರದಲ್ಲಿ ಜರಗಿತು.ತೆಂಕು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾಯನ ವೈಭವ ನಡೆಯಿತು.
ಯಕ್ಷಧ್ರುವತಾರೆ ಪಟ್ಲ ಸತೀಶ್ ಶೆಟ್ಟರ ಸ್ವರಮಾಧುರ್ಯಕ್ಕೆ ಬಡಗಿನ ಗಾನಸಾರಥಿ ಅಮೋಘ ಕಂಠ ಸಿರಿಯ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸ್ವರ ಮಿಳಿತವಾಯಿತು.ತೆಂಕು ಬಡಗಿನ ಮಿಳಿತ ಮಾಧುರ್ಯದ ಸತ್ಯನಾರಾಯಣ ಪುಣಿಚಿತ್ತಾಯರ ಸ್ವರ ನಿನಾದಿಸಿ ರಾಗಸರಾಗವಾಗಿ ಅನುರಣಿಸುವ ಮಹಾಭಾಗವತಿಕೆ,ಇವೆಲ್ಲಕ್ಕೆ ಕಲಶವಿಡುವಂತೆ ತೆಂಕುತಿಟ್ಟಿನ ಪದ್ಮನಾಭ ಉಪಾಧ್ಯಾಯ ಉಜಿರೆ,ಗುರುಪ್ರಸಾದ್ ಬೊಳಿಂಜಡ್ಕ, ರಾಜೇಂದ್ರಕೃಷ್ಣ ಪಂಜಿಗದ್ದೆ ಮತ್ತು ಬಡಗಿನ ಸುನಿಲ್ ಭಂಡಾರಿ ಕಡತೋಕ,ಹಾಗೂ ಸುಜನ್ ಹಾಲಾಡಿಯವರ ಹಿಮ್ಮೇಳವಾದನ ವೈಖರಿ,ಗುರುರಾಜ ಹೊಳ್ಳ ಬಾಯಾರು ಇವರ ನಿರೂಪಣೆ ಮೇಳೈಸಿತು.