ತಿರುವನಂತಪುರ: ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದನ್ನು ಖಂಡಿಸಿ ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಮೂವರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.
ಪ್ರತಿಭಟನೆ ವೇಳೆ 3 ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿಯಲಾಗಿದ್ದು, ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಎಸ್'ಡಿಪಿಐ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಇದಲ್ಲದೆ, ಪೊಲೀಸರು, ಮಾಧ್ಯಮದ ವರದಿಗಾರರು ಹಾಗೂ ಲೇಖಕರ ಮೇಲೆಯೂ ದಾಳಿಗಲು ನಡೆದಿರುವುದಾಗಿ ವರದಿಗಳು ತಿಳಿಸಿವೆ. ಪ್ರತಿಭಟನೆ ವೇಳೆ 7 ಪೊಲೀಸ್ ವಾಹನಗಳು ಹಾಗೂ 79 ಕೆಎಸ್‍ಆರ್'ಟಿಸಿ ಬಸ್ ಗಳನ್ನು ಧ್ವಂಸಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ತಿರುವನಂತಪುರಂನ ನೆಡುಮಂಗಡುವಿನಲ್ಲಿ ಕೆಲ ದುಷ್ಕರ್ಮಗಿಳು ಬಾಂಬ್ ದಾಳಿಯನ್ನೂ ನಡೆಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
ಈ ನಡುವೆ ಮಾಧ್ಯಮ ವರದಿಗಾರರ ಮೇಲೆ ನಡೆದ ದಾಳಿಯನ್ನು ಕೇರಳ ಪತ್ರಕರ್ತ ಸಂಘಟನೆ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಬಿಜೆಪಿ ಮುಖ್ಯಸ್ಥ ಶ್ರೀಧರನ್ ಪಿಳ್ಳೈ ಅವರ ಪತ್ರಿಕಾಗೋಷ್ಠಿಯನ್ನೂ ಬಹಿಷ್ಕರಿಸಿದೆ.
ಮಾಧ್ಯಮ ವರದಿಗಾರರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಅವರು, ಆಯಾ ಜಿಲ್ಲಾ ಮುಖ್ಯಸ್ಥರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.