ಕಾಸರಗೋಡು: ಜಿಲ್ಲೆಯಲ್ಲಿ ಒಟ್ಟು 4 ಸಾವಿರ ಮಂದಿ ಕ್ಯಾನ್ಸರ್ ರೋಗಿಗಳಿದ್ದಾರೆ ಎಂದು ಪತ್ತೆ ಮಾಡಲಾಗಿದೆ. ರಾಜ್ಯದ ಸಂಪೂರ್ಣ ಕ್ಯಾನ್ಸರ್ ಮಾಹಿತಿ ಸಂಗ್ರಹವನ್ನು ಜಿಲ್ಲೆಯಲ್ಲಿ ಈಗಾಗಲೇ ಪೂರ್ಣಗೊಳಿಸಲಾಗಿದೆ. ಮನೆ ಮನೆ ಭೇಟಿ ಮೂಲಕ ಕ್ಯಾನ್ಸರ್ ರೋಗಿಗಳ ಮಾಹಿತಿ ಸಂಗ್ರಹಿಸಿದ ಆರೋಗ್ಯ ಇಲಾಖೆ ಕಾರ್ಯಕರ್ತರು ರೋಗಿಗಳ ಸವಿವರವನ್ನು ಸಂಗ್ರಹಿಸಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕೃತರು ತಿಳಿಸಿದ್ದಾರೆ.
ತಲಶ್ಯೇರಿಯ ಮಲಬಾರ್ ಕ್ಯಾನ್ಸರ್ ಸೆಂಟರ್, ಜಿಲ್ಲಾ ಪಂಚಾಯತಿನ ಕ್ಷೇಮ ವಿಭಾಗ, ಆರೋಗ್ಯ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಅತಿಜೀವಿತಂ ಎಂಬ ಯೋಜನೆ ರೂಪಿಸಲಾಗಿದ್ದು ಇದರ ಮೂಲಕ ರೋಗಿಗಳ ಚಿಕಿತ್ಸೆ, ರೋಗ ಪತ್ತೆ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಜ್ಯಾರಿಗೆ ತರಲಾಗುವುದು ಎಂದು ಜಿಲ್ಲಾ ಪಂಚಾಯತು ಹೇಳಿದೆ. ಕಿರಿಯ ವೈದ್ಯಾಧಿಕಾರಿಗಳು ಸಹಿತ ಪಾಲಿಯೇಟಿವ್ ಕೇರ್ ಸಿಬ್ಬಂದಿಗಳು ಜಿಲ್ಲೆಯ ಪ್ರತಿ ಮನೆಗಳಿಗೆ ಬೇಟಿ ನೀಡುವ ಮೂಲಕ ಕ್ಯಾನ್ಸರ್ ರೋಗಿಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ. ರೋಗಿಗಳ ಮಾಹಿತಿ ಸಂಗ್ರಹಕ್ಕೆ ತೆರಳಿದ್ದವರಿಗೆ ವಿಶೇಷ ತರಬೇತಿ ನೀಡಲಾಗಿತ್ತು. ರೋಗಿಗೆ ಯಾವ ಕ್ಯಾನ್ಸರ್ ಬಾಧಿಸಿದೆ, ಯಾವ ಘಟ್ಟದಲ್ಲಿದೆ, ಚಿಕಿತ್ಸೆ ಹೇಗೆ ಎಂಬ ಮಾಹಿತಿಯು ಕ್ಯಾನ್ಸರ್ ರಿಜಿಸ್ಟ್ರಿ ಒಳಗೊಳ್ಳಲಿದೆ. ರೋಗದ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸಲು ಸಾರ್ವಜನಿಕರಿಗಾಗಿ ನಾನಾ ಮಾಹಿತಿ ಕಾರ್ಯಾಗಾರಗಳು ಏರ್ಪಡಲಿವೆ. ಕಾಸರಗೋಡು ಮತ್ತು ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸಾ ಸೌಲಭ್ಯಗಳು ಏರ್ಪಡಿಸಬೇಕು ಮಾತ್ರವಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅರ್ಬುದ ರೋಗ ಪತ್ತೆ ವ್ಯವಸ್ಥೆಯನ್ನು ಮಾಡಬೇಕು ಎಂದು ಬೇಡಿಕೆಯಿರಿಸಲಾಗಿದೆ.
ಏನಂತಾರೆ:
ಕ್ಯಾನ್ಸರ್ ರಿಜಿಸ್ಟ್ರಿ ಹೊತ್ತಗೆ ಹೊರಬಂದ ಮೇಲೆ ಸ್ಥಳೀಯಾಡಳಿತಗಳ ಮೂಲಕ ಕ್ಯಾನ್ಸರ್ ರೋಗ ಪತ್ತೆಗೆ ಅವಶ್ಯವಾದ ಹಣವನ್ನು ಮೀಸಲಿಡಬೇಕು ಮಾತ್ರವಲ್ಲದೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅರ್ಬುದ ರೋಗ ಪತ್ತೆ ವ್ಯವಸ್ಥೆ ಆರಂಭವಾಗಬೇಕು. ಜಿಲ್ಲಾಸ್ಪತ್ರೆಯಲ್ಲಿ ಓಂಕಾಲಜಿ ವಿಭಾಗವನ್ನು ಆರಂಭಿಸುವಂತಾಗಲು, ಈ ನಿಟ್ಟಿನಲ್ಲಿ ಜಿ.ಪಂ ನಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕ್ಯಾನ್ಸರ್ ಮುಕ್ತ ಜಿಲ್ಲೆಯಾಗಿಸುವುದೇ ನಮ್ಮ ಆದ್ಯ ಗುರಿ.
ಎ.ಜಿ.ಸಿ ಬಶೀರ್
ಕಾಸರಗೋಡು ಜಿ.ಪಂ ಅಧ್ಯಕ್ಷ .