ನವದೆಹಲಿ: ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಇದುವರೆಗೆ 10 ರಿಂದ 50 ವರ್ಷದೊಳಗಿನ 51 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರ ಶುಕ್ರವಾರ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಶಬರಿಮಲೆ ದೇವಸ್ಥಾನ ಪ್ರವೇಶಿಸಿದ ನಂತರ ಭದ್ರತೆ ಕೋರಿ ಬಿಂದು ಹಾಗೂ ಕನಕಾ ದುರ್ಗ ಎಂಬ ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇರಳ ಸರ್ಕಾರ, ಕೋರ್ಟ್ ಗೆ ಈ ಮಾಹಿತಿ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಮತ್ತು ನ್ಯಾಯಾಧೀಶರಾದ ಎಲ್.ಎನ್. ರಾವ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಬಿಂದು ಹಾಗೂ ಕನಕಾ ದುರ್ಗ ಅವರಿಗೆ 24*7 ಭದ್ರತೆ ಕೊಡುವಂತೆ ಕೇರಳ ಪೊಲೀಸರಿಗೆ ತಾಕೀತು ಮಾಡಿದೆ.
ಇದೇ ವೇಳೆ ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳೊಂದಿಗೆ ಈ ವಿಚಾರ ತಳಕು ಹಾಕುವುದಕ್ಕೆ ನ್ಯಾಯಪೀಠ ನಿರಾಕರಿಸಿದೆ.
10 ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕ ಲ್ಪಿಸಿದ ಮೂರು ತಿಂಗಳ ಬಳಿಕ ಪೊಲೀಸರ ಭದ್ರತೆಯೊಂದಿಗೆ ಬಿಂದು ಹಾಗೂ ಕನಕಾ ದುರ್ಗ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.