ಬದಿಯಡ್ಕ: ಕನ್ನಡ ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ನಾವೆಷ್ಟು ಪ್ರೋತ್ಸಾಹ ನೀಡುತ್ತಿದ್ದೇವೆ ಎಂಬುದರ ಮೇಲೆ ಸಂಸ್ಕøತಿ ಪ್ರೀತಿ ನಿಕ್ಷಿಪ್ತವಾಗಿದೆ. ಆದರೂ ಗಡಿನಾಡಿನ ಕನ್ನಡದ ಸಾಂಸ್ಕøತಿಕತೆಗೆ ಸವಾಲುಗಳು ಎಷ್ಟಿದ್ದರೂ ಸಿರಿಗನ್ನಡದ ಶಕ್ತಿ ಕುಂಠಿತವಾಗದು ಎಂದು ಹಿರಿಯ ಕನ್ನಡ ಹೋರಾಟಗಾರ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ನಾರಾಯಣ ಗಟ್ಟಿ ಕುಂಬಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಬದಿಯಡ್ಕದ ಶ್ರೀರಾಮ ಯೋಗ ಕೇಂದ್ರದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ತಿಂಗಳ ಕಾರ್ಯಕ್ರಮ ಕನ್ನಡ ಸಾಹಿತ್ಯ ಸಿರಿಯ 7ನೇಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ, ಸಂಸ್ಕøತಿಯ ಬಗೆಗಿನ ಆಸಕ್ತಿಗೆ ಪುಸ್ತಕಗಳ ಓದು ಸಹಕಾರಿಯಾಗಿದೆ. ಗಡಿನಾಡಿನ ಹೋರಾಟ ಸದಾಶಯದೆಡೆಗೆ ಸಾಗುವಲ್ಲಿ ಪ್ರಬಲ ಇಚ್ಚಾಶಕ್ತಿಯ ಅಗತ್ಯ ಇದೆ ಎಂದು ಅವರು ತಿಳಿಸಿದರು. ಸರಕಾರಗಳಿಗೆ ಇಚ್ಚಾಶಕ್ತಿ ಇದ್ದರಷ್ಟೆ ಕನ್ನಡ ಸಂರಕ್ಷಣೆ ಸಾಧ್ಯವಿದೆ ಎಂದು ತಿಳಿಸಿದ ಅವರು, ಗಡಿನಾಡಿನ ಕನ್ನಡ ಶಿಕ್ಷಕರು, ಇತರರು ಗಡಿನಾಡಿನ ಸೌಲಭ್ಯ-ಸವಲತ್ತುಗಳನ್ನು ಅನುಭವಿಸುತ್ತಿದ್ದರೆ, ಅದರ ಹಿಂದಿನ ಹೋರಾಟ-ಶ್ರಮಗಳನ್ನು ಅಥೈಸಬೇಕು ಎಂದು ವಿಶ್ಲೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸರ್ವೋದಯ ಚಳವಳಿಯ ಹಿರಿಯ ನಾಯಕ ನಾಮದೇವ ಶೆಣೈ ಬದಿಯಡ್ಕ ಅವರು ಮಾತನಾಡಿ, ಸ್ವಾತಂತ್ರ್ಯ-ಸ್ವರಾಜ್ಯ ಹೋರಾಟದ ಕಲ್ಪನೆಗಳು ಇಂದು ಮಬ್ಬಾಗುತ್ತಿರುವುದು ಚಿಂತೆಗೀಡುಮಾಡಿದೆ. "ಕಾಯಕವೇ ಕೈಲಾಸ, ಹಂಚಿ ಉಂಡರೆ ಹಸಿವಿಲ್ಲ ಹಾಗೂ ನೆರೆಮನೆ ಇಲ್ಲದೆ ಅರಮನೆಯಿಲ್ಲ" ಎಂಬ ತ್ರಿಸೂತ್ರದಡಿ ರಾಷ್ಟ್ರದ ಪುನರುತ್ಥಾನಕ್ಕೆ ಹೊಸ ತಲೆಮಾರನ್ನು ಸಿದ್ದಗೊಳಿಸಬೇಕು ಎಂದು ತಿಳಿಸಿದರು. ಇಂದಿನ ವ್ಯಾವಹಾರಿಕ ಜಗತ್ತು ಮಿಥ್ಯೆಯ ಸಂಬಂಧ, ಸರಕುಗಳ ಆನಂದ ಹಾಗೂ ದುಡಿತವಿಲ್ಲದ ಬದುಕಿನತ್ತ ಸಾಗುತ್ತಿದೆ. ಆದರೆ ಭಾರತದ ಪೂರ್ವ ಪರಿಕಲ್ಪನೆಯ ಗ್ರಾಮ ಸ್ವರಾಜ್ಯ ಸಾಕಾರವಾಗದೆ ಸ್ವಾತಂತ್ರ್ಯ-ಪ್ರಜಾಪ್ರಭುತ್ವ ತನ್ಮೂಲಕ ಕಲ್ಯಾಣ ರಾಜ್ಯವನ್ನು ನಿರ್ಮಿಸಲಾಗದು ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಕನ್ನಡ ಭಾಷೆ, ಅದರೊಂದಿಗೆ ಪೂರಕವಾದ ಪುಸ್ತಕಗಳ ಓದನ್ನು ನವ ತಾರುಣ್ಯಕ್ಕೆ ಪರಿಚಯಿಸುವ ಚಟುವಟಿಕೆ ಸ್ತುತ್ಯರ್ಹವಾದುದು ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷ, ನಿವೃತ್ತ ಉಪನೋಂದಾವಣಾಧಿಕಾರಿ ಮೊಹಮ್ಮದಾಲಿ ಪೆರ್ಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಸ್ಪರ ಅರಿತು ಬಾಳುವುದರಿಂದ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪುಸ್ತಕಗಳ ಓದು ವೈರುದ್ಯದ ಗೋಡೆಗಳನ್ನು ಕೆಡವಿ ಸೋದರತೆಯ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾವಿದೆ ಚನಿಯಾರು ಚೆನ್ನಾರುಕಟ್ಟೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ರಾಮ ಪಟ್ಟಾಜೆ ಅವರು ಅಭಿನಂದನಾ ಭಾಷಣಗೈದು ಚನಿಯಾರು ಅವರ ಪಾಡ್ದನ ವಾಚನಾ ಜ್ಞಾನದ ಬಗ್ಗೆ ಮಾಹಿತಿ ನೀಡಿದರು. ಪುರುಷೋತ್ತಮ ಭಟ್ ಕೆ ಅವರು ನಾಮದೇವ ಶೆಣೈ ಅವರ ಬಗ್ಗೆ ಕಿರು ಪರಿಚಯದ ಆಶಯ ನುಡಿಗಳನ್ನಾಡಿ, ಸ್ವರಚಿತ ಕವನ ವಾಚನ ನಡೆಸಿದರು.
ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಸಿರಿಯ ಬಗ್ಗೆ ಬೆಳಕು ಚೆಲ್ಲಿದರು. ಕನ್ನಡ ಸಾಹಿತ್ಯ ಸಿರಿಯ ಪ್ರಧಾನ ಕಾರ್ಯದರ್ಶಿ ಡಾ.ಬೇ.ಸಿ.ಗೋಪಾಲಕೃಷ್ಣ ಸ್ವಾಗತಿಸಿ, ನಾರಾಯಣ ಭಟ್ ಮೈರ್ಕಳ ವಂದಿಸಿದರು. ರವಿಕಾಂತ ಕೇಸರಿ ಕಡಾರು ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟ ಚನಿಯಾರು ಚೆನ್ನಾರಕಟ್ಟೆ ಅವರು ಪಾಡ್ದನವೊಂದನ್ನು ಹಾಡುವ ಮೂಲಕ ಸಮಾರಂಭವನ್ನು ಔಚಿತ್ಯಪೂರ್ಣಗೊಳಿಸಿದರು. ಮುಖ್ಯ ಅತಿಥಿಗಳಾಗಿದ್ದ ನಾಮದೇವ ಶೆಣೈ ಅವರು ಸ್ವಾತಂತ್ರ್ಯ ಹೋರಾಟ, ಸರ್ವೋದಯ ಚಳವಳಿಯ ಘೋಷಣಾಹಾಡುಗಳನ್ನು ತಮ್ಮ 94ರ ಇಳಿಯ ಹರೆಯದಲ್ಲೂ ಹಾಡುವ ಮೂಲಕ ಗಮನ ಸೆಳೆದರು.