ಕೊಚ್ಚಿ: ರಾಜ್ಯದಲ್ಲಿ ಪದೇಪದೆ ನಡೆಯುತ್ತಿರುವ ಮುಷ್ಕರಗಳಿಂದಾಗಿ ಸುಮಾರು 50 ಲಕ್ಷ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಕೇರಳ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳ ಒಕ್ಕೂಟ ತೀವ್ರ ಕಳವಳ ವ್ಯಕ್ತಪಡಿಸಿದೆ.
ಮುಷ್ಕರದಿಂದಾಗಿ ರಾಜ್ಯದಲ್ಲಿ ಶಾಲೆಗಳು ಆಗಾಗ ಬಂದ್ ಆಗುತ್ತಿರುವುದನ್ನು ತಡೆಯಲು ಶಿಕ್ಷಣ ಸಂಸ್ಥೆಗಳನ್ನು ಸಹ ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಬೇಕು ಎಂದು ಶಾಲೆಗಳ ಒಕ್ಕೂಟ ಎಲ್ಲಾ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿದೆ.
ಈ ವರ್ಷ ರಾಜ್ಯದಲ್ಲಿ ಸುಮಾರು 90 ಮುಷ್ಕರಗಳು ನಡೆದಿವೆ. ಶಾಲೆಗಳು ಕೇವಲ 190 ದಿನಗಳು ಮಾತ್ರ ಕಾರ್ಯನಿರ್ವಹಿಸಿವೆ. ಶಾಲೆಗಳು ಕನಿಷ್ಠ 220 ದಿನಗಳು ಕಾರ್ಯನಿರ್ವಹಿಸಬೇಕು. ಹಾಗ ಪಠ್ಯಕ್ರಮ ಪೂರ್ಣಗೊಳಿಸಲು ಸಾಧ್ಯ. ಶಾಲೆಗಳು ಕನಿಷ್ಠ 220 ದಿನ ಕಾರ್ಯನಿರ್ವಹಿಸದಿದ್ದರೆ ಪಠ್ಯಕ್ರಮ ಪೂರ್ಣಗೊಳಿಸುವುದು ತುಂಬಾ ಕಷ್ಟವಾಗುತ್ತದೆ. ಇದರ ಪರಿಣಾಮ ನಮ್ಮ ರಾಜ್ಯದ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಪರೀಕ್ಷೆಗಳಲ್ಲಿ ಇತರೆ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಟಿಪಿಎಂ ಇಬ್ರಾಹಿಂ ಖಾನ್ ಅವರು ಹೇಳಿದ್ದಾರೆ.
ಇದು ಕೇವಲ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳ ಸಮಸ್ಯೆ ಮಾತ್ರ ಅಲ್ಲ. ರಾಜ್ಯದ ಸರ್ಕಾರಿ ಶಾಲೆಗಳಲ್ಲೂ ಇದೇ ಸಮಸ್ಯೆ ಇದೆ ಎಂದು ಅವರು ತಿಳಿಸಿದ್ದಾರೆ.