ಬದಿಯಡ್ಕ: ಸಮಾಜದಲ್ಲಿ ಈ ರಾಷ್ಟ್ರದ ಆಂತರಿಕ ವಿಚಾರಗಳನ್ನು ದೇಶೋನ್ನತಿಯ ಸತ್ಪಥದಲ್ಲಿ ಮುನ್ನಡೆಸಲು ಪ್ರೇರಣದಾಯಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಗತ್ಯವಿದೆ. ಭಾರತ ಮುನ್ನಡೆಯಬೇಕೆಂದಾದರೆ ಇಲ್ಲಿಯ ಮೂಲ ಪರಂಪರೆಯ ಸನಾತನ ಧರ್ಮ ಉಳಿಯಬೇಕು. ಸನಾತನತೆಯ ಉಳಿಯುವಿಕೆಗೆ ನಂಬಿಕೆ-ಆಚರಣೆ, ಕಲೆ-ಸಂಸ್ಕøತಿಗಳ ಉಚ್ಚ್ರಾಯತೆ ಆಗಬೇಕು ಎಂದು ಹಿಂದೂ ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷ, ಧಾರ್ಮಿಕ ಮುಖಂಡ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಕರೆನೀಡಿದರು.
ರಾಷ್ಟ್ರೋತ್ಥಾನಕ್ಕಾಗಿ ಸಕಾರಾತ್ಮಕ ಶಕ್ತಿ ಸಂಚಯನದ ಉದ್ದೇಶದೊಂದಿಗೆ ನೀರ್ಚಾಲು ಮಾನ್ಯ ಸಮೀಪದ ಮೇಗಿನಡ್ಕದಲ್ಲಿ ಹಮ್ಮಿಕೊಳ್ಳಲಾಗಿದ್ದದ ಚತುರ್ಮುಖ ಚಿಂತನೆಗಳಿಂದೊಡಗೂಡಿದ ನಮೋ, ಜ್ಞಾನ, ಭಕ್ತಿ, ಯಕ್ಷ ಯಜ್ಞಗಳ ಕೊನೆಯ ದಿನವಾದ ಸೋಮವಾರ ನಡೆದ ಯಕ್ಷ ಯಜ್ಞ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ರಾಷ್ಟ್ರದ ಅಲ್ಲಲ್ಲಿ ನಂಬಿಕೆ-ಪರಂಪರೆಗಳನ್ನು ಹೊಸಕುವ ಯತ್ನಗಳು ನಡೆಯುತ್ತಿರುವುದನ್ನು ಕಾಣುತ್ತೇವೆ. ಮಣ್ಣಿನ ಪರಂಪರೆಯ ಅರಿವಿನ ಕೊರತೆ ಮತ್ತು ಸಮಾಜದೊಳಗಿನ ಜನರ ಮಧ್ಯೆ ಇರುವ ವಿಘಟನೆಯಿಂದ ಅಂತಹ ಶಕ್ತಿಗಳು ವಿಜ್ರಂಭಿಸುತ್ತಿರುವದಕ್ಕೆ ಬಲ ನೀಡುತ್ತಿದೆ. ಯಕ್ಷಗಾನ ಕಲೆಯು ದೈವಿಕವಾದ ನೆಲೆಗಟ್ಟಿನೊಂದಿಗೆ ಸಂಸ್ಕøತಿ ಅರಿವಿನ ಪ್ರಚೋದಕವಾಗಿ ಈ ಮಣ್ಣಿನಿಂದ ಹುಟ್ಟಿ ಬೆಳೆದ ಮಹಾನ್ ಕಲೆಯಾಗಿದ್ದು, ಪೋಶಿಸಿ ಬೆಳೆಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎಂದು ಅವರು ತಿಳಸಿದರು. ಮಾನ್ಯ ಮೇಗಿನಡ್ಕದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಹೊಸ ಚಿಂತನೆಗಳಿಂದೊಡಗೂಡಿದ ಮೌಲ್ಯಯುತ ಕಾರ್ಯಕ್ರಮ ಮಾದರಿಯಾಗಿದ್ದು, ಮತ್ತೆ ನಮೋ ಚಿಂತನೆಗೆ ಕ್ರಿಯಾತ್ಮಕ ಬಲ ನೀಡಿದೆ ಎಂದು ಅವರು ತಿಳಿಸಿದರು.
ಜಗದ್ಗುರುತ್ವ ಎನ್ನುವುದು ಕೇವಲ ಅಂತರಾಷ್ಟ್ರ ಮಟ್ಟದಲ್ಲಿ ವ್ಯಾವಹಾರಿಕ ಜಗತ್ತಿಗೆ ಮಾತ್ರ ಸೀಮಿತವಲ್ಲ. ದೇಶದೊಳಗಿನ ವಿಘಟನಕಾರಿ ಶಕ್ತಿಗಳನ್ನು ನಿಯಂತ್ರಿಸಿ ನಮ್ಮ ಕಲೆ, ಸಂಸ್ಕøತಿ, ಭಾಷೆ, ಜೀವನ ಕ್ರಮಗಳನ್ನು ಉನ್ನತಿಗೊಯ್ಯುವುದೂ ಆಗಿದೆ. ಗಡಿನಾಡು ಕಾಸರಗೋಡಿನ ಮೂಲ ಪರಂಪರೆಯಾದ ಕನ್ನಡವನ್ನು ವಿಪುಲವಾಗಿ ಬೆಳೆಸುವ, ದಮನಕಾರಿ ವ್ಯವಸ್ಥೆಯನ್ನು ನಿಯಂತ್ರಿಸುವ ಒಗ್ಗಟ್ಟುಗಳಿಗೆ ಯಕ್ಷಗಾನ ಕಲೆ ಇಲ್ಲಿ ಉಳಿದು ಬೆಳೆಯಬೇಕು ಎಂದು ತಿಳಿಸಿದರು.
ಮಲ್ಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದೊಳಗಿನ ಪ್ರತಿಯೊಂದು ಪಾರಂಪರಿಕ ಕಲೆಯೂ ಇಲ್ಲಿಯ ಸಂಸ್ಕøತಿಯ ದ್ಯೋತಕವಾಗಿದೆ. ಗಡಿನಾಡಿನ ಕನ್ನಡ ಪರಂಪರೆಯಲ್ಲಿ ಯಕ್ಷಗಾನದ ಅನಘ್ರ್ಯ ಕೊಡುಗೆಗಳಿಗೆ ಇಂದಿನ ಸಮಾಜ ಎಂದಿಗೂ ಆಭಾರಿಯಾಗಿರುತ್ತದೆ. ಯಕ್ಷೋಪಾಸನೆಯ ಮೂಲಕ ರಾಷ್ಟ್ರ, ಸಂಸ್ಕøತಿಯ ಚಿಂತನೆಗಳು, ಭಾಷಾಭಿಮಾನ, ಏಕತೆಯ ಭಾವ ನಮ್ಮನ್ನು ಜಾಗೃತಿಗೊಳಿಸುತ್ತದೆ ಎಂದು ತಿಳಿಸಿದರು.
ಕೊಲ್ಲಂಗಾನ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಉಪಸ್ಥಿತರಿದ್ದು ಮಾತನಾಡಿ, ಹೊಸ ಯುವ ತಲೆಮಾರು ಯಕ್ಷಗಾನದತ್ತ ಆಕರ್ಷಿತರಾಗಿ ಮುಂದೆ ಬರುತ್ತಿದ್ದರೂ, ಪರಂಪರೆಯ ಸಂಪ್ರದಾಯಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲೂ ಮುನ್ನಡೆಯಬೇಕು. ಸಂಘಟಿತರಾಗಿ ಆರ್ಥಿಕ ಸುದೃಢತೆಯನ್ನೂ ಹೊಂದುವ ಅಗತ್ಯ ಇದ್ದು, ಉತ್ತಮ ವಿದ್ಯೆ, ಉದ್ಯೋಗದ ಕಡೆಗೂ ಮನಮಾಡಬೇಕು. ಆರ್ಥಿಕ ದೃಢತೆಯ ಮೂಲಕ ಕಲೆ, ಸಂಸ್ಕøತಿಯ ವಕ್ತಾರರಾಗಲು ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಾಲಿಗ್ರಾಮ ಮೇಳದ ಖ್ಯಾತ ಮದ್ದಳೆಗಾರ ಕೋಟ ಶಿವಾನಂದ ಅವರನ್ನು ಗೌರವಪೂರ್ವಕ ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜಕ ಡಾ.ಮನೋಹರ ಮೇಗಿನಡ್ಕ ಉಪಸ್ಥಿತರಿದ್ದು ಮಾತನಾಡಿ, ರಾಷ್ಟ್ರ ಚಿಂತನೆಯ ಸಕಾರಾತ್ಮಕ ಶಕ್ತಿ ಸಂಚಯನಕ್ಕಾಗಿ ತಾನು ಸಹೃದಯರ ನೆರವಿನೊಂದಿಗೆ ಹಮ್ಮಿಕೊಂಡ ನಾಲ್ಕು ದಿನಗಳ ಕಾರ್ಯಕ್ರಮ ಅಭೂತಪೂರ್ವ ಯಶಸ್ಸುಪಡೆದಿದ್ದು, ಇಂತಹ ಚಟುವಟಿಕೆ ಇನ್ನಷ್ಟು ಮೂಡಿಬರಬೇಕೆಂಬುದು ಅಭಿಲಾಷೆ ಎಂದು ತಿಳಿಸಿದರು.
ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶಾನುಭೋಗ್ ಕಿರಿಮಂಜೇಶ್ವರ ವಂದಿಸಿದರು. ಬಳಿಕ ಸಾಲಿಗ್ರಾಮ ಮೇಳದವರಿಂದ ಚಂದ್ರಾವಳಿ ವಿಲಾಸ ಹಾಗೂ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿಯವರಿಂದ ಜಲಂಧರ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ಎಡನೀರು ಪಾಡಿ ಅರಮನೆಯ ರಾಜೇಂದ್ರ ಅರಸ ದಂಪತಿಗಳು, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಹಿರಿಯ ಚಿತ್ರಕಲಾವಿದ ಬಾಲ ಮಧುರಕಾನನ ದಂಪತಿಗಳು, ಯಕ್ಷಮಿತ್ರರು ನೀರ್ಚಾಲಿನ ಪ್ರತಿನಿಧಿಗಳಾದ ಸುಂದರ ಶೆಟ್ಟಿ ಕೊಲ್ಲಂಗಾನ, ವಿಜಯಕುಮಾರ್ ಮಾನ್ಯ, ಪೆರ್ಲ ಸತ್ಯನಾರಾಯಣ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ, ಸುಜಾತಾ ಆರ್.ತಂತ್ರಿ ಮೊದಲಾದ ಗಣ್ಯರ ಸಹಿತ ನೂರಾರು ಸಂಖ್ಯೆ ಜನರು ಭಾಗವಹಿಸಿದ್ದರು.