ಮುಂಬೈ: ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ಹಗರಣವನ್ನು ತಡೆಯಬಹುದಿತ್ತು ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸೋಮವಾರ ಹೇಳಿದರು.
ಸುಪ್ರೀಂ ಕೋರ್ಟ್ ಆದೇಶವಿದ್ದರೂ ಲೋಕಪಾಲ್ ನೇಮಿಸಿದ ಕೇಂದ್ರ ಸರ್ಕಾರದ ವಿರುದ್ಧ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿರುವ ಹಣ್ಣಾ ಹಜಾರೆ ಅವರು, ದೇಶವು ನಿರಂಕುಶಾಧಿಕಾರದೆಡೆಗೆ ಸಾಗುತ್ತಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ನಂತಹ ಹಗರಣಗಳು ನಡೆಯುತ್ತಿರಲಿಲ್ಲ. ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಅದರ ಬಗ್ಗೆ ಅಧ್ಯಯನ ನಡೆಸಿ ಎರಡು ದಿನಗಳಲ್ಲೇ ಮತ್ತೆ ಸುದ್ದಿಗೋಷ್ಠಿ ನಡೆಸುತ್ತೇನೆ. ರಾಫೆಲ್ ಒಪ್ಪಂದಕ್ಕು ಕೇವಲ ಒಂದು ತಿಂಗಳ ಮುನ್ನ ಸ್ಥಾಪಿತವಾದ ಕಂಪನಿಯನ್ನು ರಾಫೆಲ್ ಯುದ್ಧ ವಿಮಾನದ ಪಾಲುದಾರನನ್ನಾಗಿ ಮಾಡಿಕೊಂಡಿದ್ದು ಹೇಗೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಅಣ್ಣಾ ಹಜಾರೆ ಅವರು ಲೋಕಪಾಲ್ ನೇಮಕಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಜನವರಿ 30ರಿಂದ ಮಹಾರಾಷ್ಟ್ರದ ರಾಳೆಗಣ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದಾರೆ. ಇದು ಲೋಕಪಾಲ್ ಹಾಗೂ ಲೋಕಾಯುಕ್ತ ಕಾಯ್ದೆ ಜಾರಿಗಾಗಿ ಕಳೆದ ಎಂಟು ವರ್ಷಗಳಲ್ಲಿ ಅವರು ನಡೆಸುತ್ತಿರುವ ಮೂರನೇ ಉಪವಾಸ ಸತ್ಯಾಗ್ರಹ ಇದಾಗಲಿದೆ.