ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅಭಿಮತ
ಬದಿಯಡ್ಕ: ಕಾವ್ಯ ಕಟ್ಟುವ ಪ್ರಕ್ರಿಯೆಯು ಅಂತರಾಳದಿಂದ ಆವಿರ್ಭವಿಸುವುದಾಗಿದ್ದು, ಕಾವ್ಯ ದರ್ಶನದಲ್ಲಿ ಮಾತ್ರ ಕವಿಗೆ ಕಾವ್ಯ ಹುಟ್ಟಲು ಸಾಧ್ಯ. ಅವಸರದ ಸಾಹಿತ್ಯಗಳಿಗೆ ಬಾಳುವಿಕೆ ಇರಲಾರದು ಎಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ, ಕವಿ ಟಿ.ಎ.ಎನ್. ಖಂಡಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅಕ್ಷರಕಾಶಿ ನೀರ್ಚಾಲು ಮಹಾಜನ ಶಿಕ್ಷಣ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುತ್ತಿರುವ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಂತರಂಗದ ಸಮವೇಧನೆಗಳು ಅಕ್ಷರ ರೂಪದಲ್ಲಿ ವರ್ಣನೆಗೊಳಪಡುವ ಕಾವ್ಯ ಪ್ರಕಾರಗಳು ಹೊರಗಿನ ಒತ್ತಡವಲ್ಲ ಬೇಕಿರುವುದು. ಒಳಗಿನ ಒತ್ತಡಗಳಿಂದ ಜೀವ ತಳೆವ ಕಾವ್ಯಗಳಿಗೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇರುತ್ತದೆ ಎಂದು ತಿಳಿಸಿದರು. ಬೇಯುವಿಕೆ, ಕಾಯುವಿಕೆ ಮತ್ತು ಗುರುವಿನ ನಿರ್ಧೇಶನದಿಂದ ಸಾಹಿತ್ಯ ಪ್ರಕಾರಗಳ ರಚನೆ ರಸಾಸ್ವಾಧನೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ರಾಜಶ್ರೀ ತಾರಾನಾಥ ರೈ, ವಿರಾಜ ಅಡೂರು, ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಅಕ್ಷತಾರಾಜ್ ಪೆರ್ಲ, ಜ್ಯೋಸ್ನ್ಸಾ ಎಂ.ಕಡಂದೇಲು, ವಿದ್ಯಾಗಣೇಶ್ ಅಣಂಗೂರು, ಹರ್ಷಿತಾ ಕೆ.ಕಟ್ಟದಮೂಲೆ, ಸತ್ಯವತಿ ಎಸ್.ಭಟ್ ಕೊಳಚಪ್ಪು, ಗಣೇಶ್ ಪ್ರಸಾದ್ ನಾಯ್ಕ್, ನವೀನ ಕುಂಟಾರು, ಸೌಮ್ಯಾ ಪ್ರಸಾದ್ ಕಿಳಿಂಗಾರು, ಪದ್ಮಾವತಿ ಏದಾರು, ರೇಖಾ ಶ್ರೀನಿವಾಸ ಮುನಿಯೂರು ಸ್ವರಚಿತ ಕವನಗಳನ್ನು ವಾಚಿಸಿದರು. ಸುಕುಮಾರ ಆಲಂಪಾಡಿ ಸ್ವಾಗತಿಸಿ, ವಾಣಿ ಪಿ.ಎಸ್ ವಂದಿಸಿದರು. ಶೈಲಜಾ ಟೀಚರ್ ನಿರೂಪಿಸಿದರು.
ಬಳಿಕ ಡಾ.ಶಶಿರಾಜ ನೀಲಂಗಳ ಅವರಿಂದ ಪಾದುಕಾ ಪ್ರಧಾನ ಕಥಾ ಭಾಗದ ಗಮಕ ಸೌರಭ ಪ್ರಸ್ತುತಗೊಂಡಿತು. ಜಯಶ್ರೀ ಕಾರಂತ ಮಂಗಲ್ಪಾಡಿ ಅವರು ವ್ಯಾಖ್ಯಾನಕಾರರಾಗಿ ಸಹಕರಿಸಿದರು.