ನವದೆಹಲಿ: ಪೋಷಕರು ಮಕ್ಕಳಿಂದ ಹೆಚ್ಚಿನದನ್ನೂ ನಿರೀಕ್ಷಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಪರೀಕ್ಷಾ ಪೇ ಚರ್ಚೆಯ ಎರಡನೇ ಆವೃತ್ತಿಯಲ್ಲಿ ಇಂದು ಪಾಲ್ಗೊಂಡಿದ್ದ ಮೋದಿ, ವಿದ್ಯಾಭ್ಯಾಸ, ಪರೀಕ್ಷೆಗೆ ಸಂಬಂಧಿತ ವಿಷಯ ಕುರಿತಂತೆ ಮಾತನಾಡಿದರು.
ನೀವು ಕಂಡಿದ್ದ ಕನಸುಗಳನ್ನು ಈಡೇರಿಸುವಂತೆ ಮಕ್ಕಳ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಾರದು, ಎಲ್ಲಾ ಮಕ್ಕಳು ತಮ್ಮದೇ ಆದ ಸಾಮಥ್ರ್ಯ, ಸ್ವಂತ ಶಕ್ತಿ ಹೊಂದಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಲ್ಲಿನ ಈ ಸಕಾರಾತ್ಮಕ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಟೌನ್ ಹಾಲ್ ನಲ್ಲಿ ಸೇರಿದ ಮಕ್ಕಳು, ಪೋಷಕರು, ಹಾಗೂ ಶಿಕ್ಷಕರಿಂದ ಸಂತೋಷಗೊಂಡ ಪ್ರಧಾನಿ ಇದು ಮಿನಿ ಇಂಡಿಯಾ ಎಂದು ಬಣ್ಣಿಸಿದರು. ಇಲ್ಲಿ ನಮ್ಮ ಭವಿಷ್ಯ ಭಾರತವೇ ಇದೆ. ತಂತ್ರಜ್ಞಾನದಿಂದ ಮಕ್ಕಳ ಬುದ್ದಿಶಕ್ತಿ ವಿಸ್ತರಣೆಯಾಗುತ್ತದೆ. ಆದಾಗ್ಯೂ, ಮೈದಾನದಲ್ಲಿ ಮಕ್ಕಳು ಆಟವಾಡುವುದನ್ನು ಮರೆಯಬಾರದು ಎಂದು ಮೋದಿ ಹೇಳಿದರು.