ತುಮಕೂರು: ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ.
ಶಿವಕುಮಾರ ಸ್ವಾಮೀಜಿ ಅವರು ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ಗಂಗಮ್ಮನವರಿಗೆ ಎಪ್ರಿಲ್ 1, 1907ರಲ್ಲಿ 13ನೇ ಮಗುವಾಗಿ ಜನಿಸಿದ್ದರು.
ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನು ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ.
ಬೆಳಿಗ್ಗೆ 11.44ರ ಸುಮಾರಿಗೆ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ನಾಳೆ 3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4.30ರ ಸುಮಾರಿಗೆ ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿದೆ.
ಶಿವಕುಮಾರ ಸ್ವಾಮೀಜಿ ಅವರು ಶಿವೈಕ್ಯರಾಗಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇನ್ನು ಸ್ವಾಮೀಜಿಯ ಅಂತಿಮ ದರ್ಶನ ಪಡೆಯುವ ಭಕ್ತರಿಗೆ ಅನುಕೂಲವಾಗಲು ಉಚಿತ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದರು.
ನಾಳೆ ಮೋದಿ ಆಗಮನ ನಿರೀಕ್ಷೆ:
ಶ್ರೀಗಳ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆ ಇದೆ ಎಮದು ತಿಳಿದುಬಂದಿದೆ.