ಬದಿಯಡ್ಕ: ರಾಷ್ಟ್ರೀಯಮಟ್ಟದಲ್ಲಿ ಮಿಂಚಿ ಕಾಸರಗೋಡಿಗೆ ಕೀರ್ತಿ ತಂದಿರುವ ಮೊಗೇರ ಸಮುದಾಯದ ಮೂವರು ಕ್ರೀಡಾ ಪ್ರತಿಭೆಗಳನ್ನು ಇತ್ತೀಚೆಗೆ ಬದಿಯಡ್ಕದ ದರ್ಭೆತ್ತಡ್ಕ ಶ್ರೀ ಧ್ಯಾನಮಂಟಪದಲ್ಲಿ ನಡೆದ ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಅಭಿನಂದಿಸಲಾಯಿತು.
ಗುಜರಾತಿನ ಗೋದ್ರಾದಲ್ಲಿ ನಡೆದ ರಾಷ್ಟ್ರಮಟ್ಟದ ವಿದ್ಯಾರ್ಥಿಗಳ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಜಾವಲಿನ್ ಎಸೆತದಲ್ಲಿ ಬೆಳ್ಳಿ ಪದಕ ಪಡೆದ ಜಯರಾಜ್ ಎ., ಆಂದ್ರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಶಾಲಾ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ವಿನೀತ್ ರಾಜ್ ಹಾಗೂ ಪೆರಿಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಾಲಾ ಆಟೋಟಸ್ಪರ್ಧೆಗಳಲ್ಲಿ ಭಾಗವಹಿಸಿ ಸಮಗ್ರ ಚಾಂಪ್ಯನ್ ಪಟ್ಟವನ್ನು ತಿಲಕ್ ರಾಜ್ ಪಡೆದಿದ್ದರು.
ಸಮಿತಿಯ ಅಧ್ಯಕ್ಷ ಆನಂದ ಕೆ.ಮವ್ವಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತನ್ನ ಸ್ವ ಪ್ರತಿಭೆಯನ್ನು ಪ್ರದರ್ಶಿಸಿ ದೇಶದ ಗಮನವನ್ನು ಸೆಳೆದರೂ ಸರಕಾರವಾಗಲಿ, ಯಾವುದೇ ಸಂಘಟನೆಯಾಗಲಿ ಈ ಕ್ರೀಡಾಳುಗಳನ್ನು ಇದುವರೆಗೆ ಅಭಿನಂದಿಸಲಿಲ್ಲ. ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದಿಂದಲೇ ಈ ಕಾರ್ಯವು ಸಾಧ್ಯವಾದುದು ಶ್ಲಾಘನೀಯ ಎಂದರು.
ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಚೇವಾರು ಅವರು ಮೊಗೇರರ `ಬರಿ'ಯ ಬಗ್ಗೆ ಹಾಗೂ ಕವಿ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಧೂರಿನಲ್ಲಿ ಮದರು ಮಹಾಮಾತೆಯ ಇತಿಹಾಸದ ಕುರಿತು ಉಪನ್ಯಾಸವನ್ನು ನೀಡಿದರು. ಸಾಮಾಜ ಸೇವಕ ರಾಮಪ್ಪ ಮಂಜೇಶ್ವರ, ಕೃಷ್ಣದಾಸ್ ದರ್ಭೆತ್ತಡ್ಕ, ಕೃಷ್ಣ ದರ್ಭೆತ್ತಡ್ಕ, ವಸಂತ ಅಜಕ್ಕೋಡು ಶುಭಾಶಂಸನೆಗೈದರು. ಸುಂದರ ಮಾಲಂಗೈ, ಸುರೇಶ ಅಜಕ್ಕೋಡು, ಚಂದ್ರ ನೀರ್ಚಾಲು, ಸುಧಾಕರ ಬೆಳ್ಳಿಗೆ, ಅನಿಲ್ ಅಜಕ್ಕೋಡು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಡಿ. ಸ್ವಾಗತಿಸಿ, ಗೋಪಾಲ ಡಿ.ವಂದಿಸಿದರು. ಸುಂದರ ಬಾರಡ್ಕ ಕಾರ್ಯಕ್ರಮ ನಿರೂಪಿಸಿದರು.