ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಲ್ಲಿ ಉಪಯೋಗಿಸಲಿರುವ ಮರದ ಸಲಕರಣೆಗಳನ್ನು ತಯಾರಿಸುವ ಮುಹೂರ್ತ ಗುರುವಾರ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.
ಸಮಾರಂಭದ ಮೊದಲು ಗಣಹೋಮವನ್ನು ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿಗಳವರು ನಡೆಸಿದರು. ಬ್ರಹ್ಮಶ್ರೀ ಪುರೋಹಿತ ರತ್ನ ಬಿ. ಕೇಶವ ಆಚಾರ್ಯ ಉಳಿಯತ್ತಡ್ಕರ ಆಚಾರ್ಯತ್ವದಲ್ಲಿ ಮೂವಜೆ,ಬಂಬ್ರಾಣದ ಶಿಲ್ಪಿ ಚಂದ್ರಶೇಖರ ಆಚಾರ್ಯರು ಮರದ ಸಲಕರಣೆಗಳ ತಯಾರಿಯ ಮುಹೂರ್ತ ನಡೆಸಿಕೊಟ್ಟರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಯಾಗದ ಪ್ರಧಾನ ಸಮಿತಿಯ ಕಾರ್ಯಾಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ, ಕ್ಷೇತ್ರದ ಅಧ್ಯಕ್ಷ ಉಮೇಶ ಆಚಾರ್ಯ ಪೋಳ್ಯ, ಬ್ರಹ್ಮಶ್ರೀ ಪುರೋಹಿತ ರತ್ನ ಬಿ. ಕೇಶವ ಆಚಾರ್ಯ ಉಳಿಯತ್ತಡ್ಕ, ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ರಾಮಕೃಷ್ಣ ಆಚಾರ್ಯ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟ್ರಮಣ ಆಚಾರ್ಯ ಮುಳಿಗದ್ದೆ, ಶ್ರೀ ಕ್ಷೇತ್ರದ ಮಹಿಳಾ ಸಂಘದ ಅಧ್ಯಕ್ಷೆ ಕೊಂಡೆವೂರಿನ ವನಿತಾ ತುಕಾರಾಮ ಆಚಾರ್ಯ ಮತ್ತು ಕೊಂಡೆವೂರು ಆಶ್ರಮದ ಶ್ರೀ ವಿಷ್ಣುಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಉಪಸ್ಥಿತರಿದ್ದರು. ಡಾ. ಶ್ರೀಧರ ಭಟ್ ರವರು ಯಾಗದ ವಿವರ, ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಅವುಗಳ ಮಹತ್ವವನ್ನು ತಿಳಿಸಿ ವಿಶ್ವಕರ್ಮ ಬ್ರಾಹ್ಮಣ ಸಮುದಾಯದವರು ಸರ್ವರೀತಿಯಲ್ಲೂ ಸಹಕರಿಸಬೇಕೆಂದು ವಿನಂತಿಸಿದರು. ಶ್ರೀ ಕ್ಷೇತ್ರದ ಉಪಾಧ್ಯಕ್ಷ ಕೆ. ಯಂ. ಗಂಗಾಧರ ಆಚಾರ್ಯ ಕೊಂಡೆವೂರು ಸ್ವಾಗತಿಸಿ ನಿರೂಪಿಸಿದರು. ಹರೀಶ್ ಮಾಡ ವಂದಿಸದಿರರು. ಶಾಂತಿಮಂತ್ರದೊಂದಿಗೆ ಸಭಾಕಾರ್ಯಕ್ರಮ ಮುಕ್ತಾಯಗೊಂಡಿತು.