ಕೊಚ್ಚಿ: ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಶ್ರೀಲಂಕಾದ 46 ವರ್ಷದ ಮಹಿಳೆಯೊಬ್ಬರು ಅಯ್ಯಪ್ಪ ದರ್ಶನ ಪಡೆದ ಮೂರನೇ ಮಹಿಳೆಯಾಗಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಕೇರಳ ಪೊಲೀಸ್ ಇಲಾಖೆಯೇ ಸ್ಪಷ್ಟನೆ ನೀಡಿದ್ದು, ಇಂದು(ಶುಕ್ರವಾರ) ಬೆಳಿಗ್ಗೆ 46 ವರ್ಷದ ಶ್ರೀಲಂಕಾ ಮೂಲದ ಮಹಿಳೆ ಶಶಿಕಲಾ ಎಂಬುವವರು ಶಬರಿಮಲೆಯಲ್ಲಿರುವ ಪವಿತ್ರ ಸನ್ನಿಧಾನಂಗೆ ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆ ಶಬರಿಮಲೆಗೆ ತೆರಳಿದ ವಿಚಾರ ವೈರಲ್ ಆಗುತ್ತಿದ್ದಂತೆಯೇ ಪಂಪಾ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಹಿಳೆ ಶಶಿಕಲಾ ಅವರು, 'ನನ್ನನ್ನು ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ. ನಾನು ಅಯ್ಯಪ್ಪನ ನಿಜವಾದ ಭಕ್ತೆ. 48 ದಿನ ಮಾಲೆ ಧರಿಸಿ ದೇವರನ್ನು ಆರಾಧಿಸಿದ್ದೇನೆ. ನಾನು ಯಾರಿಗೂ ಭಯಪಡಲಾರೆ. ಅವರೇಕೆ ನನ್ನನ್ನು ತಡೆಯಬೇಕು. ನನ್ನ ಬಳಿ ವೈದ್ಯಕೀಯ ದಾಖಲೆಗಳಿವೆ. 48 ವರ್ಷ ಪೂರೈಸಿರುವ ನನ್ನ ಗರ್ಭಕೋಶವನ್ನು ಕಾರಣಾಂತರಗಳಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಲಾಗಿದೆ. ಈ ಬಗ್ಗೆ ನಾನು ವೈದ್ಯಕೀಯ ದಾಖಲೆ ಹೊಂದಿದ್ದೇನೆ. ಆದರೂ ನನ್ನನ್ನು ದೇವರ ದರ್ಶನಕ್ಕೆ ಬಿಡಲಿಲ್ಲ' ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಶಿಕಲಾ ಪತಿ, ದೇಗುಲಕ್ಕೆ ಇನ್ನು ಒಂದು ಕಿಲೋಮೀಟರ್ ಇರುವಾಗಲೇ ಮರಕೂಟಮ್ ಎಂಬಲ್ಲಿ ನಮ್ಮನ್ನು ತಡೆಯಲಾಯಿತು. ಹೀಗಾಗಿ ನಾನು ನನ್ನ ಮಗ ಮಾತ್ರ ದರ್ಶನ ಪಡೆದೆವು. ಶಶಿಕಲಾ ಹಿಂದಕ್ಕೆ ಹೋದರು ಎಂದು ಅವರು ಹೇಳಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸ್ಪಷ್ಟನೆ ನೀಡಿರುವ ಕೇರಳ ಪೊಲೀಸರು, ದೇಗುಲದ ಸಿಸಿಟಿವಿಯಲ್ಲಿ ಶ್ರೀಲಂಕಾದ ಮಹಿಳೆ ದೇಗುಲ ಪ್ರವೇಶ ಮಾಡಿ ಅಯ್ಯಪ್ಪನ ದರ್ಶನ ಪಡೆದಿರುವುದು ಖಚಿತವಾಗಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ವಿವಾದ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬುಧವಾರವಷ್ಟೇ ಇದೇ ಕೇರಳದ ಬಿಂದು ಮತ್ತು ಕನಕ ಎಂಬ ಮಹಿಳೆಯರು ವಿರೋಧದ ನಡುವೆಯೂ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಈ ಘಟನೆ ಬಳಿಕ ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರ ಆಕ್ರೋಶ ಮುಗಿಲುಮಟ್ಟಿದ್ದು, ಕೇರಳ ಬೂದಿ ಮುಚ್ಚಿದ ಕೆಂಡದಂತಿದೆ. ಕೇರಳದಾದ್ಯಂತ ಹಿಂದೂಪರ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿವೆ.