ಮಂಜೇಶ್ವರ: ವಿಧಾನಸಭಾ ಮ್ಯೂಸಿಯಂ ಚಿತ್ರಪ್ರದರ್ಶನ ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ಆರಂಭಗೊಂಡಿದ್ದು, ಕೇರಳ ವಿಧಾನಸಭೆ ಪ್ರಾಚ್ಯವಸ್ತು ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸಹಕಾರದೊಂದಿಗೆ ಜರುಗುತ್ತಿದೆ.
ಪ್ರಜಾಪ್ರಭುತ್ವ ನೀತಿಯ ಮೌಲ್ಯಗಳನ್ನು ದೇಶದ ಸಂವಿಧಾನದ ಹಿನ್ನೆಲೆಯಲ್ಲಿ ಜನತೆಗೆ ತಿಳಿಸುವ ಮಹತ್ತರ ಉದ್ದೇಶದಿಂದ ಜ.14 ರಂದು ಮಂಜೇಶ್ವರದಿಂದ ಆರಂಭಗೊಂಡು ತಿರುವನಂತಪುರದ (ಜ.24) ವರೆಗೆ ಪರ್ಯಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆಯ ಪೂರ್ವಭಾವಿಯಾಗಿ ಈ ಪ್ರದರ್ಶನ ನಡೆಯುತ್ತಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಪ್ರದರ್ಶನವನ್ನು ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿಧಾನಸಭೆ ವಿಭಾಗ ಅಧಿಕಾರಿ ಎ.ವಿಜಯನ್ ಅಮೃತರಾಜ್ ಪ್ರಧಾನ ಭಾಷಣ ಮಾಡಿದರು.
ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಹರೈನ್ ಮಹಮ್ಮದ್, ಮಹಮ್ಮದ್ ಮುಸ್ತಫ, ಮಂಜೇಶ್ವರ ಗ್ರಾಮ ಪಂಚಾಯತ್‍ನ ಮುಕ್ತಾರ್, ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ, ಸದಸ್ಯೆ ಸುಪ್ರಿಯ ಶೆಣೈ, ಜಿಲ್ಲಾ ಸಾಕ್ಷರತಾ ಮಿಷನ್ ಯೋಜನೆ ಸಂಚಾಲಕ ಶಾಜು ಜೋನ್, ಸಹಾಯಕ ಸಂಚಾಲಕ ಶಾಸ್ತಾ ಪ್ರಸಾದ್, ಗೀತಾ ಟೀಚರ್, ನೋಡೆಲ್ ಪ್ರೇರಕ್ ಗ್ರೇಸಿ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.