ಕಾಸರಗೋಡು: ಕಾಂಞಂಗಾಡು ನೆಹರೂ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಪಿ.ವಿ.ಪುಷ್ಪಜಾ ಅವರ ಮನೆಗೆ ಬಾಂಬ್ ಎಸೆತದ ಘಟನೆಯು ಸಿಪಿಎಂನ ಉಗ್ರಗಾಮಿ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದರು. ಬಾಂಬ್ ಎಸೆದು ಹಲವು ದಿನಗಳು ಕಳೆದರೂ ಈ ಬಗ್ಗೆ ಬಹಿರಂಗವಾಗದಿರುವುದು ಪಕ್ಷದ ಕೋಟೆಗಳಲ್ಲಿ ಉಗ್ರ ಚಟುವಟಿಕೆಗಳ ವ್ಯಾಪ್ತಿಯನ್ನು ತೋರಿಸುತ್ತಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿರುವರು.
ತಾಲಿಬಾನ್ ಕೇಂದ್ರಗಳಿಗಿಂತಲೂ ಮಿಗಿಲಾದ ಭೀಕರ ಸ್ಥಿತಿ ಸಿಪಿಎಂ ಕೋಟೆಗಳಲ್ಲಿ ಇದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಮಹಿಳಾ ಗೋಡೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿರುವುದೇ ಪುಷ್ಪಜಾರ ಮನೆಗೆ ಬಾಂಬ್ ಎಸೆಯಲು ಕಾರಣವಾಯಿತು ಎಂದು ದೂರಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರನ್ನು ದೂರುವವರನ್ನು ಇಲ್ಲದಂತೆ ಮಾಡುವುದೇ ಇವರ ನಿಲುವು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ನಿವೃತ್ತ ಪ್ರಾಂಶುಪಾಲೆಯವರ ಮನೆಗೆ ರಕ್ಷಣೆ ನೀಡಲು ಸರಕಾರವು ಸಿದ್ಧವಾಗಬೇಕೆಂದು ಬಿಜೆಪಿ ಒತ್ತಾಯಿಸಿದೆ. ಅವರ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಬಿಜೆಪಿ ಸಿದ್ಧ ಎಂದು ಕೆ.ಶ್ರೀಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಖಂಡನೆ : ನಿವೃತ್ತ ಪ್ರಾಂಶುಪಾಲೆ ಡಾ.ಪಿ.ವಿ.ಪುಷ್ಪಜಾರ ಮನೆಗೆ ಬಾಂಬ್ ಎಸೆದ ಸಮಾಜ ದ್ರೋಹಿಗಳ ಕೃತ್ಯ ಮನುಷ್ಯತ್ವ ರಹಿತವಾಗಿದ್ದು, ಅರಾಜಕತೆ ಸೃಷ್ಟಿಗೆ ಯತ್ನಿಸುವುದಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್ ಆರೋಪಿಸಿದ್ದಾರೆ. ಈ ಕೃತ್ಯ ಅಕ್ರಮ ರಾಜಕೀಯಕ್ಕೆ ನಿದರ್ಶನವಾಗಿದ್ದು, ಈ ರೀತಿಯ ಹೀನ ಕೃತ್ಯಗಳನ್ನು ಕೇರಳ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವರು ಒಗ್ಗಟ್ಟಿನಿಂದ ಎದುರಿಸಲು ಅಖಾಡಕ್ಕೆ ಇಳಿಯಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿರುವರು.