ನಿನ್ನೆ ಅಗಲಿದ ಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ತಮ್ಮ ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ 1, 1908ರಲ್ಲಿ 13ನೇ ಮಗು ಶಿವಣ್ಣನವರಾಗಿ ಜನಿಸಿದರು. ಹೊನ್ನೆಗೌಡ ದಂಪತಿಗಳಿಗೆ ಎಂಟು ಜನ ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು, ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದಲ್ಲಿಯೇ ಇರುವ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಶಾಲಾ ಪ್ರಾಥಮಿಕಾ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಡ ಶಿವಣ್ಣ ಅನಂತರ ಬೆಳೆದಿದ್ದು ಅಕ್ಕನ ಆಸರೆಯಲ್ಲಿ. ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ಶಿವಣ್ಣ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರ ದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಶಿವಣ್ಣನವರು ಶಿಸ್ತುಬದ್ಧವಾದ ಕಟ್ಟು ನಿಟ್ಟಾದ ವಿದ್ಯಾರ್ಥಿ ಜೀವನ ನಡೆಸಿದರು.ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟವಂತೂ ಮುಂದುವರೆದೇ ಇತ್ತು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಬಂದು ಹೋಗಿ ಮಾಡುತ್ತಿದ್ದರು, ಎಷ್ಟರ ಮಟ್ಟಿಗೆ ಎಂದರೆ ಇಡೀ ತುಮಕೂರು ಜಿಲ್ಲೆ ಒಮ್ಮೆ ಭೀಕರ ಪ್ಲೇಗ್ ರೋಗಕ್ಕೆ ತತ್ತರಿಸಿತು ಹಾಗಿದ್ದಾಗ್ಯೂ ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು.
ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ 1930ರಲ್ಲಿ ಬರ ಸಿಡಿಲು ಬಡಿದಂತಹ ಒಂದು ಘಟನೆ ನಡೆಯುತ್ತದೆ. ಅದೇನೆಂದರೆ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನವರ ಕಡೆ ಉದ್ಧಾನ ಸ್ವಾಮಿಜಿಗಳ ದೃಷ್ಟಿ ಹರಿಯುತ್ತದೆ. ಅಷ್ಟರಲ್ಲಾಗಲೇ ಶಿವಣ್ಣನವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೆ ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ. ಎಲ್ಲರಂತೆ ಸಾಮಾನ್ಯರಾಗಿ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣನವರು ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ಶ್ರೀ ಶಿವಕುಮಾರ ಸ್ವಾಮಿಜಿಗಳಾಗಿ ಹಿಂದಿರುಗುತ್ತಾರೆ. ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಮತ್ತೆ ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತಲೂ ಹಾಗು ಶಿಸ್ತುಬದ್ಧ ವಿದ್ಯಾರ್ಥಿಯಾಗಿಯೂ ತಮ್ಮ ಒಡನಾಡಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.ವಿದ್ಯಾಭ್ಯಾಸ ಮುಗಿದು ಸ್ವಾಮಿಜಿಯವರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿ, ಅಂದಿನಿಂದ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ಇದಾಗಿ ಮುಂದೆ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತವೂ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ..
ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಅಷ್ಟರಲ್ಲಾಗಲೇ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಅಡಿಯಿಡುತ್ತಿದ್ದ ಭಾರತ ಶಿಕ್ಷಣದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸಲು ಹಾಗು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಲು ಸರ್ಕಾರವೂ ಸೇರಿದಂತೆ ಅನೇಕ ಮಹನೀಯರು ಮೊದಲಾದರು. ಆದರೆ ಸಿದ್ದಗಂಗೆಯಲ್ಲಿ ಅದಾಗಲೇ ಅವೆಲ್ಲವೂ ಕಾರ್ಯರೂಪಕ್ಕೆ ಬಂದಾಗಿತ್ತು. ಸಾಲದ್ದಕ್ಕೆ ಅಲ್ಲಿ ಕಲಿಯುತ್ತಿದ್ದ ಬಹುಪಾಲು ಎಲ್ಲರೂ ಗ್ರಾಮೀಣ ಮಕ್ಕಳೇ. ಈ ಕಾರ್ಯ ರಾಷ್ಟ್ರ ಮಟ್ಟದಲ್ಲೂ ಬಹಳ ಶ್ಲಾಘನೆಗೆ ಒಳಗಾಗಿ, ಸಿದ್ದಗಂಗೆಯ ಕೀರ್ತಿ ಎಲ್ಲೆಡೆ ಹರಡಲು ಪ್ರಾರಂಭವಾಯಿತು.ಸಿದ್ದಗಂಗೆಯ ಕೀರ್ತಿ ಪಸರಿಸಿದಂತೆ ಅಲ್ಲಿನ ಭಕ್ತ ವರ್ಗವೂ, ವಿಧ್ಯಾರ್ಥಿ ಸಂಕುಲವೂ ಕಾಲಕ್ರಮೇಣ ಹೆಚ್ಚುತ್ತಾ ಹೋಯಿತು. ಇದು ಸ್ವಾಮೀಜಿಯವರ ದೂರದರ್ಶಿತ್ವಕ್ಕೆ ಒಂದು ಉದಾಹರಣೆ.
ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನುಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಾರೆ. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ಸಿಹಿ ಹಾಗೂ ಖಾರ ಚಟ್ನಿ’ ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, ಬೇವಿನ-ಚಕ್ಕೆ ಕಷಾಯ ಸೇವನೆಯಾಗುತ್ತದೆ.
ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಾರೆ, ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರ ವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು. ಮಠದ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಛೇರಿಗೆ ಧಾವಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಾರೆ. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಾರೆ. ಮಳೆ-ಬೆಳೆ, ಕುಶಲೋಪರಿ ವಿಚಾರ,ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ,ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಾರಲ್ಲದೆ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ ಕಾಯಕವೇ ಕೈಲಾಸ ಎಂದು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ.
ನಡೆದಾಡುವ ದೇವರು ಮತ್ತೆ ಹುಟ್ಟಿ ಬರಲಿ ಎಂಬುದೇ ಕೋಟಿ ಕೋಟಿ ಹೃದಯಗಳ ಕೋರಿಕೆ..