ಕಾಸರಗೋಡು: ಜಿಲ್ಲೆಯ ಶಿಕ್ಷಣಾಲಯಗಳು ಮತ್ತು ಆಸುಪಾಸು ಇನ್ನು ಮುಂದೆ ಹೊಗೆಸೊಪ್ಪು ಬಳಕೆ ರಹಿತ ಪ್ರದೇಶಗಳು ಎಂಬ ಹೊಗೆಸೊಪ್ಪು ವಿರೋಧಿ ನೀತಿಯನ್ನು ಘೋಷಿಸಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಹೊಗೆಸೊಪ್ಪು ಬಳಕೆ ನಿಯಂತ್ರಣ ಕಾರ್ಯಕ್ರಮ(ಎನ್.ಟಿ.ಪಿ.ಸಿ.) ಜಂಟಿ ವತಿಯಿಂದ ನಡೆಸಲಾಗುವ ಹೊಗೆಸೊಪ್ಪು ಬಳಕೆ ರಹಿತ ಶಿಕ್ಷಣಾಲಯ ಎಂಬ ಯೋಜನೆಯ ನಿನ್ನೆ ನಡೆದ ಜಿಲ್ಲಾ ಮಟ್ಟದ ಉದ್ಘಾಟನೆ ಸಂದರ್ಭ ಈ ಘೋಷಣೆ ಮಾಡಲಾಗಿದೆ.
ಪ್ರತಿ ಮಗುವಿನ ಹಕ್ಕಾಗಿರುವ ಆರೋಗ್ಯಕರ ಬದುಕು, ಉತ್ತಮ ಶಿಕ್ಷಣ ಇತ್ಯಾದಿಗಳಿಗಾಗಿ ಹೊಗೆಸೊಪ್ಪು ಬಳಕೆ ವಿರುದ್ಧ ಶಾಲಾ ಮಕ್ಕಳು ಪ್ರತಿಜ್ಞೆ ಕೈಗೊಂಡರು. ಶಾಲಾ ಆವರಣದ 93 ಮೀಟರ್ ಅಂತರದಲ್ಲಿ ಹೊಗೆಸೊಪ್ಪು,ಅಮಲು ಪದಾರ್ಥ ಮಾರಾಟ, ಬಳಕೆ ಸಲ್ಲದು ಎಂಬ ಕಾನೂನಿಗೆ ಬೆಂಬಲ ಸೂಚಿಸಿ ವಿದ್ಯಾರ್ಥಿಗಳು ಸಂರಕ್ಷಣೆ ಸಂಕಲೆ (ಮಾನವ ಸರಪಳಿ)ನಿರ್ಮಿಸಿದರು.
ತಳಂಗರೆ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಹೊಗೆಸೊಪ್ಪು -ಮಾದಕ ಪದಾರ್ಥ ಮಾಫಿಯಾಗಳ ಆಮಿಷಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವ ಈ ಕಾಲಾವ„ಯಲ್ಲಿ ಅದನ್ನು ಮೀರಿ ಸಾಮಾಜಿಕ ಒಳಿತಿಗಾಗಿ ಸಕ್ರಿಯರಾಗಲು ವಿದ್ಯಾರ್ಥಿಗಳು ಮುನ್ನಡೆ ಸಾ„ಸಬೇಕು. ಆರಂಭದ ಹಂತದಲ್ಲಿ ಹೊಗೆಸೊಪ್ಪಿನ ಉತ್ಪನ್ನಗಳ ಬಳಕೆ ನಂತರ ಮಾದಕ ಪದಾರ್ಥಗಳ ಬಳಕೆಗೆ ರಹದಾರಿ ತೆರೆದುಕೊಡುವ ಭೀತಿಯಿದೆ. ಈ ಬಗ್ಗೆ ಅಪಾರ ಜಾಗೃತಿ ಬೇಕು ಎಂದು ಅವರು ಆಗ್ರಹಿಸಿದರು.
ಸಂರಕ್ಷಣೆ ವಲಯದ ಫಲಕವನ್ನು ಅವರು ಅನಾವರಣಗೊಳಿಸಿದರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಟಿ.ಪಿ.ಆಮಿನಾ, ನಗರಸಭೆ ಆರೋಗ್ಯ ಮೇಲ್ವಿಚಾರಕ ಉಸ್ಮಾನ್, ಜಿ.ಎಂ.ವಿ.ಎಚ್.ಎಸ್.ಎಸ್. ಪ್ರಭಾರ ಪ್ರಾಂಶುಪಾಲ ವಿ.ಹರಿದಾಸ್, ಮುಖ್ಯಶಿಕ್ಷಕಿ ಸಿ.ವಿನೋದಾ, ಶಿಕ್ಷಕಿ ಪ್ರೀತಿ ಶ್ರೀಧರನ್, ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಟಿ.ಕೆ.ಮೂಸಾ, ಹೆಲ್ತ್ ಲೈನ್ ನಿರ್ದೇಶಕ ಮೋಹನನ್ ಮಾಂಗಾಡ್ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ ಮಾಹಿತಿ : 1) ಹೊಗೆಸೊಪ್ಪು ಮುಕ್ತ ಶಿಕ್ಷಣಾಲಯ ಫಲಕದ ಅನಾವರಣ, 2): ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರಿಂದ ಹೊಗಸೊಪ್ಪು ಮುಕ್ತ ಶಿಕ್ಷಣಾಲಯ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ