ಮಂಜೇಶ್ವರ: ಯಕ್ಷಗಾನದಲ್ಲಿ ಚಾರಿತ್ರಿಕ ಹಿನ್ನೆಲೆಯಿರುವ ಕೆರೆಮನೆ ಮನೆತನದ ಸಾರಥ್ಯದ ಶ್ರೀ ಇಡಗುಂಜಿ ಮೇಳದ ಸಾರಥಿ ಕೆರೆಮನೆ ಶಿವಾನಂದ ಹೆಗಡೆಯವರ ಆಶಯ ಮತ್ತು ಸಂಯೋಜನೆಯಲ್ಲಿ ಗುಣವಂತೆಯ ಶ್ರೀಮಯ ಯಕ್ಷಾಂಗಣದ ಬಯಲು ರಂಗಮಂದಿರದಲ್ಲಿ ಫೆ.2ರಿಂದ 5ರ ತನಕ ನಡೆಯಲಿರುವ 10ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಹಿನ್ನೆಲೆಯಲ್ಲಿ ಯಕ್ಷಗಾನದ ಪ್ರಸಿದ್ಧ, ಜನಪ್ರಿಯ ಮಾಸಪತ್ರಿಕೆ 'ಕಣಿಪುರ' ವಿಶೇಷ ಸಂಚಿಕೆ ರೂಪಿಸಿದ್ದು, ಇತ್ತೀಚಿಗೆ ಮೀಯಪದವಿನ ಚೌಟರ ಚಾವಡಿಯಲ್ಲಿ ನಡೆದ ರಾಷ್ಟ್ರೀಯ ಯಕ್ಷರಂಗೋತ್ಸವದಲ್ಲಿ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಯಕ್ಷರಂಗೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಡೆದ ಬಿಡುಗಡೆಯಲ್ಲಿ ಡಾ. ಡಿ.ಸಿ ಚೌಟ, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ಕಣಿಪುರ ಮಾಸಿಕದ ಪ್ರಧಾನ ಸಂಪಾದಕ ಎಂ.ನಾ ಚಂಬಲ್ತಿಮಾರ್, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮತ್ತು ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಉಪಸ್ಥಿತರಿದ್ದರು.
ಕಣಿಪುರ ಮಾಸಪತ್ರಿಕೆಯು ಪಾರ್ತಿಸುಬ್ಬನ ನಾಡು, ತೆಂಕಣ ಯಕ್ಷಗಾನದ ತವರುನೆಲ ಕುಂಬಳೆಯಿಂದ ಪ್ರಕಟಗೊಳ್ಳುತ್ತಿದ್ದು, ಇದೀಗ 8ನೇ ವರ್ಷಕ್ಕೆ ಕಾಲೂರಿ, 85ನೇ ಸಂಚಿಕೆಯನ್ನು 'ನಾಟ್ಯೋತ್ಸವ ದಶಮಾನ' ಸಂಚಿಕೆಯಾಗಿ ರೂಪಿಸಲಾಗಿದೆ. ತಿಟ್ಟು-ಮಟ್ಟುಗಳ ಬೇಧವಿಲ್ಲದೇ ಯಕ್ಷಗಾನದ ನಾಲ್ದೆಸೆಗಳಲ್ಲೂ ಪ್ರೌಢ ಕಲಾಪತ್ರಿಕೆಯೆಂದು ಸ್ವೀಕೃತಿಗೊಂಡು ಜನಪ್ರಿಯವಾಗಿರುವ ಪತ್ರಿಕೆ ಪ್ರತಿ ಸಂಚಿಕೆಯನ್ನೂ ವಿಷಯಾಧಾರಿತ ವಿಶೇಷವಾಗಿ ರೂಪಿಸುತ್ತಿದೆ. ನಾಟ್ಯೋತ್ಸವ ಸಂಚಿಕೆಯಲ್ಲಿ ಕೆರೆಮನೆ ಶಿವಾನಂದರ ಸಮಗ್ರ ಸಂದರ್ಶನಾಧಾರಿತ ಅಗ್ರಲೇಖನ ಮತ್ತು ನಾಟ್ಯೋತ್ಸವ ಕಾರ್ಯಕ್ರಮಗಳ ಸಮಗ್ರ ಮಾಹಿತಿಗಳಿವೆ.