ನವದೆಹಲಿ: ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ಸ್ಥಾಪಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದಲ್ಲಿನ ಪೀಠದಲ್ಲಿ ನ್ಯಾಯಾಧೀಶರಾದ ಎಸ್ ಎ ಬೊಬ್ಡೆ, ಎನ್ ವಿ ರಾಮಣ್ಣ, ಯುಯು ಲಲಿತ್ ಮತ್ತು ಡಿ. ವೈ. ಚಂದ್ರಚೂಡ್ ಇದ್ದಾರೆ.
ನಾಳೆ ಬೆಳಿಗ್ಗೆ 10 ಗಂಟೆಗೆ ಸಾಂವಿಧಾನಿಕ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ವೆಬ್ ಸೈಟ್ ನೋಟಿಸ್ ನಲ್ಲಿ ತಿಳಿಸಲಾಗಿದೆ.
ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಜನವರಿ 10 ರಂದು ಸೂಕ್ತ ಪೀಠದಲ್ಲಿ ನಡೆಸುವುದಾಗಿ ಸುಪ್ರೀಂಕೋರ್ಟ್ ಜನವರಿ 4 ರಂದು ಹೇಳಿಕೆ ನೀಡಿತ್ತು.
ವಿವಾದಿತ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಕಾರ ಹಾಗೂ ರಾಮ ಲಾಲಾ ನಡುವೆ ಮೂರು ಭಾಗಗಳಾಗಿ ಸಮನಾಗಿ ಹಂಚಿಕೆ ಮಾಡಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ 14ಕ್ಕೂ ಹೆಚ್ಚು ಮೇಲ್ಮನವಿಗಳು ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದವು.
ಜನವರಿ ಮೊದಲ ವಾರದಲ್ಲಿ ಸೂಕ್ತ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಕಳೆದ ವರ್ಷ ಅಕ್ಟೋಬರ್ 29 ರಂದು ಹೇಳಿಕೆ ನೀಡಿತ್ತು. ನಂತರ ತುರ್ತು ವಿಚಾರಣೆ ನಡೆಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ಸಂಬಂಧ ಅಕ್ಟೋಬರ್ 29 ರಂದೇ ಆದೇಶ ನೀಡಲಾಗಿದೆ ಎಂದು ಹೇಳಿತ್ತು.
ಈ ಮಧ್ಯೆ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ತರಬೇಕೆಂದು ಹಿಂದೂಪರ ಸಂಘಟನೆಗಳು ಕೇಂದ್ರಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸುಗ್ರೀವಾಜ್ಞೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಹೇಳಿಕೆ ನೀಡಿದ್ದರು.