ಪೆರ್ಲ: ಎಂಡೋಸಲ್ಫಾನ್ ದುರಂತ ಅನೇಕ ಸಾವು-ನೋವುಗಳಿಗೆ ಷರಾ ಬರೆದ ಸಂದರ್ಭದಲ್ಲಿ, ಪುನಶ್ಚೇತನಕ್ಕೆ ಟೊಂಕಕಟ್ಟಿ ನಿಂತ ರಾಜ್ಯ ಸರಕಾರದ ಯತ್ನದ ನೆರಳಲ್ಲಿ, ವಿದ್ಯೆಯ ಬೆಳಕಿನಲ್ಲಿ ಬೆಳೆಯುತ್ತಿರುವ ಸಹೋದರರು ವಿಶ್ವಕ್ಕೆ ನೀಡುತ್ತಿರುವುದು ಪ್ರೇರಣೆಯ ಸಂದೇಶವನ್ನು.
ಎಣ್ಮಕಜೆಯ ಮಕ್ಕಳು:
ರಾಷ್ಟ್ರವನ್ನೇ ಒಂದೊಮ್ಮೆ ಬೆಚ್ಚಿಬೀಳಿಸಿದ್ದ ಎಂಡೋಸಲ್ಫಾನ್ ಕೀಟನಾಶಕ ತನ್ನ ತೀಕ್ಷ್ಣ ದುಷ್ಪರಿಣಾಮ ಬೀರಿದ ಜಿಲ್ಲೆಯ ಎಣ್ಮಕಜೆ ಗ್ರಾಮಪಂಚಾಯತಿಯಲ್ಲಿ ಹುಟ್ಟಿದ ದೇವಿಕಿರಣ್ ಮತ್ತು ಜೀವನ್ ಕಿರಣ್ ಈ ರೀತಿ ಮಾದರಿಯಾಗಿ ಬಾಳುತ್ತಿದ್ದಾರೆ. ಮಾರಕ ಕೀಟನಾಶಕ ಬೀರಿದ ಪ್ರಭಾವದಿಂದ ಅಂಧತೆ ಹೊಂದಿರುವ ಇವರಿಗೆ ಕಲಿಕೆಗೆ ತಡೆಯಾಗಲಿಲ್ಲ. ರಾಜ್ಯ ಸರಕಾರದ ಸಂತ್ರಸ್ತರ ಪಟ್ಟಿಯಲ್ಲಿ ಸೇರಿರುವ ಇವರಿಗೆ ಮಾಸಿಕ ಪಿಂಚಣ,? ಇನ್ನಿತರ ಸಹಾಯಗಳು ಇವರ ಸ್ವಾವಲಂಬಿತನಕ್ಕೆ ಪೂರಕವಾಗಿದೆ.
ಕಲಿಕೆಯೊಂದಿಗೆ ಹಾಡಿನಲ್ಲಿ ನಿಸ್ಸೀಮ:
ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಬಿ.ಎ.ಇಂಗ್ಲಿಷ್ ವಿಭಾಗದ ದ್ವಿತೀಯ ವರ್ಷದಲ್ಲಿ ಕಲಿಕೆ ನಡೆಸುತ್ತಿರುವ ದೇವಿಕಿರಣ್ ಒಬ್ಬ ಒಳ್ಳೆಯ ಕಲಾವಿದರೂ ಹೌದು. ಒಳ್ಳೆಯ ಹಾಡುಗಾರರಾದ ಇವರು ಬೇರೆ ಬೇರೆ ಕಲಾಪ್ರಕಾರಗಳ ಹಿನ್ನೆಲೆಗಾಯಕರಾಗಿದ್ದು, ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಶಾಲಾ ಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ಸ್ಪರ್ಧೆಯಲ್ಲಿ ಇವರು ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಈ 22 ವರ್ಷದ ಯುವಕ ಹಾಡುಗಾರಿಕೆಯೊಂದಿಗೆ ಸುಶ್ರಾವ್ಯವಾಗಿ ಕೀಬೋರ್ಡ್ ವಾದನ ಮಾಡಬಲ್ಲರು. ಉತ್ತಮ ನಟನೂ ಆಗಿದ್ದಾರೆ.
ಶಿಕ್ಷಣ ಇಲಾಖೆ ಸಹಿತ ಸರಕಾರದ ವಿಭಾಗಗಳು ನೀಡುತ್ತಿರುವ ಸಹಾಯ, ವಿದ್ಯಾರ್ಥಿ ವೇತನ ಇತ್ಯಾದಿಗಳು ಇವರ ಪ್ರತಿಭೆಗೆ ಇನ್ನಷ್ಟು ಹೊಳಪು ನೀಡಿದೆ ಎಂದು ಈತನ ಬೆಂಬಲಕ್ಕೆ ನಿಂತ ಶಿಕ್ಷಕಿ, ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಗೀತಾ ಜಿ.ತೋಪ್ಪಿಲ್ ತಿಳಿಸುತ್ತಾರೆ.
ಇವರ ಸಹೋದರ ಜೀವನ್ ಕಿರಣ್ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ವಿದ್ಯಾರ್ಥಿ. ಮಿಮಿಕ್ರಿ ಕಲಾವಿದನಾಗಿರುವ ಈತ ಈಗಾಗಲೇ ಅನೇಕ ಕಲೋತ್ಸವಗಳಲ್ಲಿ ಅನೇಕ ಬಹುಮಾನ ಪಡೆದಿದ್ದಾರೆ.
ಅಣ್ಣನಂತೆ ತಮ್ಮ:
ಅಣ್ಣನಂತೆ ತಮ್ಮನೂ ಒಳಗಣ್ಣಿನಿಂದ ಪ್ರಪಂಚವನನು ನೋಡಿ, ಅರಿತು, ಅಲ್ಲಿ ನಡೆಸುತ್ತಿರುವ ಯತ್ನದಲ್ಲಿ ಹಂತಹಂತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಪರಿಶಿಷ್ಟ ಜಾತಿ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯಾನಗರದಲ್ಲಿ ಚಟುವಟಿಕೆ ನಡೆಸುತ್ತಿರುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ನಲ್ಲಿ ಈ ಸಹೋದರರು ತಂಗಿದ್ದು ಕಲಿಕೆ ನಡೆಸುತ್ತಿದ್ದಾರೆ.
ತಂದೆ ಕೂಲಿಕಾರ್ಮಿಕ ಈಶ್ವರ ನಾಯ್ಕ್, ತಾಯಿ ಪುಷ್ಪಲತಾ ಏತಡ್ಕ ನಿವಾಸಿಗಳಾಗಿದ್ದು, ಪುಟ್ಟ ನಿವಾಸದಲ್ಲಿ ಇವರು ಬದುಕುತ್ತಿದ್ದಾರೆ. ಎಂಡೋಸಲ್ಫಾನ್ ದುರಂತದಲ್ಲಿ ಕಂಗೆಟ್ಟಿ ಈ ಕುಟುಂಬಕ್ಕೆ ಸರಕಾರದ ಸಹಾಯಗಳು ಆಸರೆಯಾಗಿ ಹೊಸಜೀವನವನ್ನು ನೀಡಿದೆ.