ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆಯೇ ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಭೂಮಿಯಲ್ಲಿ ತಾನು ಸ್ವಾಧೀನ ಪಡಿಸಿಕೊಂಡಿದ್ದ ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.
1991ರಲ್ಲಿ ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದ ಸುಮಾರು 2.77 ಎಕರೆ ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕೆಂದು ರಾಮಜನ್ಮಭೂಮಿ ಟ್ರಸ್ಟ್ ಕೋರಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹೆಚ್ಚುವರಿ ಭೂಮಿಯನ್ನು ವಿವಾದಿತ ನಿವೇಶನಕ್ಕೆ ಪ್ರವೇಶ ಮತ್ತು ನಿರ್ಗಮನ ದಾರಿ ನಿರ್ಮಿಸಲು ಬಳಸಲಾಗುತ್ತದೆ. ಮಾಲೀಕತ್ವ ದಾವೆಯನ್ನು ಯಾರೇ ಗೆದ್ದರೂ ವಿವಾದಿತ ನಿವೇಶನಕ್ಕೆ ಪ್ರವೇಶ ಮತ್ತು ನಿರ್ಗಮನ ಮಾರ್ಗ ನಿರ್ಮಾಣ ಅನಿವಾರ್ಯ ಎಂದೂ ಕೇಂದ್ರ ಸರ್ಕಾರ ಕೋರ್ಟ್ ಗೆ ತಿಳಿಸಿದೆ.
ಇದೇ ವೇಳೆ ಹೆಚ್ಚುವರಿ ಭೂಮಿಯನ್ನು ಕೇಂದ್ರ ಸರ್ಕಾರ ತನ್ನ ವಶದಲ್ಲಿ ಇಟ್ಟುಕೊಳ್ಳವುದರಿಂದ ಏನೂ ಪ್ರಯೋಜನವಿಲ್ಲ, ಆದ್ದರಿಂದ ಅದನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುವುದೇ ಉತ್ತಮ ಎಂದು ಕೇಂದ್ರ ಸರಕಾರ ಕೋರ್ಟಿಗೆ ತಿಳಿಸಿದೆ.
2003ರಲ್ಲಿ ರಾಮ ಮಂದಿರಕ್ಕಾಗಿ ಅಯೋಧ್ಯೆಯಲ್ಲಿ ಶಿಲಾನ್ಯಾಸ ಪೂಜೆಗೆ ಅನುಮತಿ ನಿರಾಕರಿಸುವ ವೇಳೆ, ವಿವಾದಿತ ಭೂಮಿ ಹಾಗೂ ಸ್ವಾಧೀನ ಪಡಿಸಿಕೊಂಡ 67 ಎಕರೆ ಭೂಮಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. 67 ಎಕರೆಗೂ ಅಧಿಕ ಭೂಮಿಯಲ್ಲಿ ಬಹುಪಾಲನ್ನು ರಾಮಜನ್ಮಭೂಮಿ ಟ್ರಸ್ಟ್ ತನಗೆ ಸೇರಿದ್ದು ಎಂದು ವಾದಿಸಿತ್ತು. ಇದು ವಿವಾದ ರಹಿತ ಭೂಮಿಯಾಗಿದ್ದು, ಮೂಲ ಮಾಲೀಕರಿಗೆ ಬಿಟ್ಟುಕೊಡಬಹುದಾಗಿದೆ ಎಂದೂ ಹೇಳಿತ್ತು.