ಕಾಸರಗೋಡು: ಸಾಮಾಜಿಕ ಕಳಕಳಿ ಮತ್ತು ಸೇವಾ ತತ್ಪರತೆಯಿಂದ ಸಂಯೋಜಿತ ಚಿಕಿತ್ಸಾ ವ್ಯವಸ್ಥೆಯೊಂದನ್ನು ಜಗತ್ತಿಗೆ ಮೊತ್ತಮೊದಲು ಪರಿಚಯಿಸಿದ ಕೀರ್ತಿಗ ಹೊಂದಿರುವ ಐಎಡಿ(ಇನ್ಸಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟೋಲಜಿ) ಜಾಗತಿಕ ಮಟ್ಟದಲ್ಲೇ ಜಿಲ್ಲೆಯನ್ನು ಗುರುತಿಸುವಂತೆ ಮಾಡಿರುವುದು ಹೆಮ್ಮೆಯಾಗಿದೆ. ವ್ಯಾವಹಾರಿಕವಾಗಿ ಲಾಭಗಳಿಲ್ಲದೆ ದೀನರ ಆರೋಗ್ಯ ಪರ ಸೇವೆ, ಕರ್ತವ್ಯ ನಿಷ್ಠೆಗಳ ಮೂಲಕ ಐಎಡಿ ನೊಂದವರ ಪಾಲಿನ ಭರವಸೆಯ ಬೆಳಕಿಂಡಿ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಗಡಿನಾಡು ಕಾಸರಗೋಡನ್ನು ಗುರುತಿಸುವಂತೆ ಮಾಡಿರುವ ಹಲವು ಸಾಧನೆಗಳ ಪಟ್ಟಿಯಲ್ಲಿ ಕನ್ನಡಿಗರದೇ ಸಂಸ್ಥೆಯಾಗಿರುವ ಇನ್ಸಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟೋಲಜಿ(ಐಎಡಿ) ಆಯೋಜಿಸಿರುವ "ಆನೆಕಾಲು ರೋಗ ಮತ್ತು ಲಿಂಪೋಡೆಮಾದ ಬಗ್ಗೆ ಖಂಡಿತಾ ಭಯ ಬೇಡ-ನಾವು ನಿಮ್ಮ ನೋವಿಗೆ ಧ್ವನಿಯಾಗಲು ಸದಾ ತತ್ಪರರಾಗಿದ್ದೇವೆ" ಎಂಬ (ನೆವರ್ ಫಿಯರ್ ಪೈಲೇರಿಯಾಸಿಸ್ ನೋರ್ ಲಿಂಪೋಡೆಮಾ-ವಿ ಕೇರ್ ಪೋರ್ ಯು) ಘೋಷವಾಕ್ಯದೊಂದಿಗೆ ಸೋಮವಾರ ಉಳಿಯತ್ತಡ್ಕದ ಐಎಡಿ ಸಭಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ 9ನೇ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುಮುಖಿ ವಿಜ್ಞಾನ ತಂತ್ರಜ್ಞಾನ ಸೌಕರ್ಯಗಳು ವೃದ್ದಿಸಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ದಿನನಿತ್ಯ ಭಯದ ವಾತಾವರಣ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಜನಸಾಮಾನ್ಯರಿಗೆ ಚಿಕಿತ್ಸಾ ಸೌಕರ್ಯಗಳನ್ನು ವ್ಯವಸ್ಥಿತವಾಗಿ ತಲಪಿಸುವಲ್ಲಿ ತೊಡಕುಗಳಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶವೊಂದನ್ನು ಕೇಂದ್ರವಾಗಿಸಿ ರಾಷ್ಟ್ರದ ವಿವಿಧೆಡೆಗಳಿಂದ ಚಿಕಿತ್ಸೆಗಳಿಗಾಗಿ ಐಎಡಿ ಮುಂಚೂಣಿಯಲ್ಲಿ ಸೇವೆಯೊದಗಿಸುತ್ತಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಅವರು ತಿಳಿಸಿದರು.
ಆನೆಕಾಲು ಸಹಿತ ವಿವಿಧ ಚರ್ಮ ವ್ಯಾಧಿಗಳ ಸುಲಲಿತ ನಿರ್ವಹಣೆಯಲ್ಲಿ ಹೊಸ ದೃಷ್ಟಿಕೋನದ ಸಂಯೋಜಿತ ಚಿಕಿತ್ಸಾ ಕ್ರಮವನ್ನು ಪರಿಚಯಿಸಿದ ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿಯವರ ದೂರದೃಷ್ಟಿಯ ಚಿಂತನೆಗಳು ಭರವಸೆ ಮೂಡಿಸಿದೆ. ಮಿತಿಗೊಳಪಟ್ಟ ಆರ್ಥಿಕ ನಿರ್ವಹಣೆಯ ಸವಾಲಿನ ಮಧ್ಯೆ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ಐಎಡಿಯ ಸಾಧನೆಗಳು, ಕೊಡುಗೆಗಳು ಇನ್ನಷ್ಟು ಬಲಗೊಳ್ಳಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಗ್ಲೆಂಡ್‍ನ ಆಕ್ಸ್‍ಪೋರ್ಡ್ ವಿವಿಯ ಚರ್ಮರೋಗ ವಿಭಾಗದ ಮುಖ್ಯಸ್ಥ ಪ್ರೊ. ಟೆರೆನ್ಸ್ ಜೆ.ರೈಯಾನ್ ಅವರು ಮಾತನಾಡಿ, ಪ್ರಾಚೀನ ಇತಿಹಾಸ ಹಿನ್ನೆಲೆ ಹೊಂದಿರುವ ಭಾರತದ ಪರಂಪರೆಯ ಚಿಕಿತ್ಸೆಯಾದ ಆಯುರ್ವೇದವನ್ನೂ ಅಳವಡಿಸಿ ಸಂಯೋಜಿತ ಕ್ರಮವನ್ನು ಬಳಸಿ ವಿವಿಧ ವಿಭಾಗಗಳ ಆನೆಕಾಲು ರೋಗ ನಿಯಂತ್ರಣದಲ್ಲಿ ಐಎಡಿ ದಾಖಲಿಸುತ್ತಿರುವ ಸಾಧನೆ ಅತ್ಯಪೂರ್ವವಾಗಿ ಸ್ತುತ್ಯರ್ಹವೆನಿಸಿದೆ ಎಂದು ತಿಳಿಸಿದರು.
ಗುಜರಾಥಿನ ಜಾಮ್ ನಗರ ಆಯುರ್ವೇದ ಸಂಶೋಧನೆ ಮತ್ತು ವೈದ್ಯಕೀಯ ವಿವಿಯ ಮುಖ್ಯಸ್ಥ ಡಾ.ಎಂ.ಎಸ್. ಭಗೇಲ್ ಅವರು ಉಪಸ್ಥಿತರಿದ್ದು ಮಾತನಾಡಿ, ಆಯುರ್ವೇದ ಚಿಕಿತ್ಸೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತಿರುವ ಕೇರಳ ರಾಜ್ಯದ ಉತ್ತರದ ಗಡಿಯಲ್ಲಿ ಸಂಯೋಜಿತ ಚಿಕಿತ್ಸೆಯ ಮೂಲಕ ರೋಗ ನಿಯಂತ್ರಣದಲ್ಲಿ ಅಭೂತಪೂರ್ವ ಯಶಸ್ಸುಗಳಿಸಿರುವ ಐಎಡಿ ಮನುಕುಲದ ಆಸ್ತಿ ಎಂದು ತಿಳಿಸಿದರು. ರಾಜ್ಯ ಸರಕಾರ ಸಹಿತ ವಿವಿಧ ಆಡಳಿತ ಸಂಸ್ಥೆಗಳು ಐಎಡಿಯೊಂದಿಗೆ ಕೈಜೋಡಿಸುವ ಮೂಲಕ ಜೀವ ಕಲ್ಯಾಣಕ್ಕೆ ಮುಂದಾಗಬೇಕು ಎಂದು ಕರೆನೀಡಿದರು.
ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ವೈದ್ಯ ಡಾ.ಎ.ಸಿ.ಪದ್ಮನಾಭನ್ ಅವರನ್ನು ವೈದ್ಯಕೀಯ ಕ್ಷೇತ್ರದ ನಿಡುಗಾಲದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಗೌರವಾಭಿನಂದನೆಗಳೊಂದಿಗೆ ಸನ್ಮಾನಿಸಲಾಯಿತು.
ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆಡಳಿತಾಧಿಕಾರಿ ಪ್ರಜ್ವಲ್ ಆರ್.ಕೆ. ವಂದಿಸಿದರು. ನಿರ್ದೇಶಕಿ ಡಾ. ಕೆ.ಎಸ್.ಪ್ರಸನ್ನ ಸನ್ಮಾನಿತರ ಅಭಿನಂದನಾ ಭಾಷಣಗೈದರು. ಪ್ರಸನ್ನದುರ್ಗಾ ಸಿ.ಪ್ರಾರ್ಥನಾಗೀತೆ ಹಾಡಿದರು.
ಉದ್ಘಾಟನಾ ಸಮಾರಂಭದ ಮೊದಲು ಆನೆಕಾಪ್ರೊ.ಪೀಟರ್ ಮೊರ್ಟಿಮರ್ ವೈದ್ಯಕೀಯ ವಿವಿಯ ಲು ರೋಗ ನಿಯಂತ್ರಣ-ಐಎಡಿ ವಿಷಯಗಳ ಬಗ್ಗೆ ಕಿರು ವಿಚಾರ ಸಂಕಿರಣ ನಡೆಯಿತು. ಲಂಡನ್‍ನ ಸೈಂಟ್ ಜೋರ್ಜ್ ವೈದ್ಯಕೀಯ ವಿವಿಯ ಮುಖ್ಯಸ್ಥ ಪ್ರೊ.ಪೀಟರ್ ಮೋರ್ಟಿಮರ್ ಅವರಿಂದ ಲಿಂಪೋಡೆಮಾ ರೋಗದ ವಿವಿಧ ವಿಭಾಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರೊ.ಟೆರೆನ್ಸ್ ಜೆ.ರೈಯಾನ್ ಸಂಯೋಜಕರಾಗಿ ಸಹಕರಿಸಿದರು. ಪ್ರೊ.ಎಂ.ಎಸ್.ಭಗೇಲ್ ಅವರು ಚರ್ಮರೋಗ ನಿರ್ವಹಣೆ, ವಿವಿಧ ಚರ್ಮರೋಗಗಳು, ಆಯುರ್ವೇದ ಸಂಶೋಧನೆ-ಚಿಕಿತ್ಸೆಯ ಬಗ್ಗೆ ಉಪನ್ಯಾಸ ನೀಡಿದರು. ಲಂಡನ್ ನ ಸೈಂಟ್ ಜೋರ್ಜ್ ವೈದ್ಯಕೀಯ ವಿವಿಯ ಉಪನ್ಯಾಸಕ ಪ್ರೊ.ಸಹರ್ ಮನ್ಸೋರ್ ಸಂಯೋಜಕರಾಗಿ ಸಹಕರಿಸಿದರು. ಬಳಿಕ ಐಎಡಿ ಸಾಗಿಬಂದ ದಾರಿ-ಸಾಧನಾ ಪಥದ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಉದ್ಘಾಟನಾ ಸಮಾರಂಭದ ಬಳಿಕ ಪ್ರೊ.ಟೆರೆನ್ಸ್ ರೈಯಾನ್, ಪ್ರೊ.ಪೀಟರ್ ಮೋರ್ಟಿಮರ್, ಪ್ರೊ.ಎಂ.ಎಸ್.ಭಗೇಲ್, ಡಾ. ರಿ ರಿಸೈಲಿನ್ ಯೋಟ್ಸು ಸಹಿತ ಜಾಗತಿಕ ಅಗ್ರ ಕ್ರಮಾಂಕದ ಚರ್ಮ ರೋಗ ಶಾಸ್ತ್ರಜ್ಞರ ನೇತೃತ್ವದಲ್ಲಿ ಲಿಂಪೋಡೆಮಾ ವೈದ್ಯಕೀಯ ಶಿಬಿರ, ವೈದ್ಯಕೀಯ ತರಗತಿಗಳು ನಡೆಯಿತು.
ಇಂದು(ಜ. 15 ರಂದು) ವಿವಿಧ ವಿಚಾರಗೋಷ್ಠಿಗಳು, ಪ್ರಾತ್ಯಕ್ಷಿಕೆ ಮತ್ತು ಚಿಕಿತ್ಸೆಗಳು ನಡೆಯಲಿದೆ.
ಜ.16 ರಂದು ಬೆಳಿಗ್ಗೆ 8 ರಿಂದ 8.30ರ ವರೆಗೆ ಆನೆಕಾಲು ರೋಗಬಾಧಿತರಾಗಿ ಐಎಡಿಯಲ್ಲಿ ಚಿಕಿತ್ಸೆಪಡೆಯುತ್ತಿರುವವರಿಂದ ಜಾಗೃತಿ ಜಾಥಾ ಉಳಿಯತ್ತಡ್ಕ ಪೇಟೆಯಲ್ಲಿ ನಡೆಯಲಿದೆ. ಐಎಡಿ ವೈದ್ಯಕೀಯ ತಂಡ, ರಾಷ್ಟ್ರೀಯ-ಅಂತರಾಷ್ಟ್ರೀಯ ವೈದ್ಯ ವಿಜ್ಞಾನಿಗಳು, ಆಹ್ವಾನಿತ ಗಣ್ಯರು, ಕೇಂದ್ರ ಸರಕಾರದ ಆಯುಷ್ ಖಾತೆಯ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಕೊಟೇಚ ಸಹಿತರಾದವರು ಭಾಗವಹಿಸುವರು. ಬಳಿಕ 9.30ರಿಂದ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಡಾ.ಎಸ್.ಆರ್ ನರಹರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಸಾಲಿನ ವಿಚಾರ ಸಂಕಿರಣದ ಘೋಷವಾಕ್ಯದ ಬಗ್ಗೆ ಮಾರ್ಗದರ್ಶಿ ದಿಕ್ಸೂಚಿ ಭಾಷಣ ಮಾಡುವರು. ಡಾ.ಟೆರೆನ್ಸ್ ಜ ರೆಯಾನ್ ಸಂಯೋಜಿತ ಚಿಕಿತ್ಸಾ ಪರಿಣಾಮದ ಬಗ್ಗೆ, ಐಎಡಿ ಸಂಯೋಜಿತ ಚಿಕಿತ್ಸಾ ಕ್ರಮದಬಗೆಗಿನ ವಿದೇಶ ದೃಷ್ಟಿಕೋನದ ಬಗ್ಗೆ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವ ಕೇಂದ್ರ ಸರಕಾರದಾಯುಷ್ ಖಾತೆ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್ ಕೊಟೇಚಾ ಅವರು ಪ್ರಸ್ತುತ ಸಾಲಿನ ಘೋಷವಾಕ್ಯ ಬಿಡುಗಡೆಗೊಳಿಸಿ ಮಾತನಾಡುವರು. ಭಾರತ ಸರಕಾರದ ನಿಕಟಪೂರ್ವ ಎಥಿಕ್ ಸಮಿತಿಯ ಅಧ್ಯಕ್ಷೆ ನಂದಿನಿ ಕೆ.ಕುಮಾರ್ ಹಾಗೂ ಪ್ರೊ.ಎಂ.ಎಸ್. ಬಾಗೇಲ್ ಉಪಸ್ಥಿತರಿದ್ದು ಶುಭಹಾರೈಸುವರು. ಐಎಡಿ ನಿರ್ದೇಶಕ ಡಾ.ಟಿ.ಎ.ಬೈಲೂರು ಉಪಸ್ಥಿತರಿರುವರು.
ಅಪರಾಹ್ನ 3ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಪ್ರೊ.ಟೆರೆನ್ಸ್ ಜೆ.ರೆಯಾನ್, ಲಂಡನ್‍ನ ಸೈಂಟ್ ಜಾರ್ಜ್ ವಿವಿಯ ಪ್ರೊ.ಪೀಟರ್ ಮೋರ್ಟಿಮರ್, ಜೆಎಸ್‍ಎಸ್ ಉನ್ನತ ವಿದ್ಯಾಭ್ಯಾಸ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ. ಮೃತ್ಯುಂಜಯ, ಜಪಾನಿನ ಟೋಕಿಯೋದಲ್ಲಿರುವ ಅಂತರಾಷ್ಟ್ರೀಯ ಆರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರದ ಡಾ.ರೀ ರೊಸೆಲ್ಲಿನ್ ಯೋಟ್ಸು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಮಾರೋಪ ಭಾಷಣ ಮಾಡುವರು. ಡಾ.ಗುರುಪ್ರಸಾದ್ ಅಗ್ಗಿತ್ತಾಯ ಉಪಸ್ಥಿತರಿರುವರು.
ವಿಚಾರ ಸಂಕಿರಣದಂಗವಾಗಿ ಜ.14 ರಿಂದ 17ರ ವರೆಗೆ ಲಿಂಪೋಡಿಮಾ ದಿನಾಚರಣೆಯ ಅಂಗವಾಗಿ ವಿಶೇಷವೈದ್ಯಕೀಯ ಶಿಬಿರ, ಸಮಾಲೋಚನೆ, ಮುಕ್ತ ಸಂವಾದಗಳನ್ನೂ ಏರ್ಪಡಿಸಲಾಗಿದೆ.