ಬದಿಯಡ್ಕ: ಜಗತ್ತಿನಾದ್ಯಂತ ಭಾರತದ ಕೀರ್ತಿ ಶಿಖರವನ್ನು ಎತ್ತರಕ್ಕೇರಿಸಿದ್ದ ಗಾಂಧೀಜಿಯವರು ಕೇವಲ ವ್ಯಕ್ತಿ ಮಾತ್ರವಾಗಿರಲಿಲ್ಲ, ಅವರು ದೇಶದ ಶಕ್ತಿಯಾಗಿದ್ದರು ಎಂದು ಏತಡ್ಕ ಶಾಲಾ ಅಧ್ಯಾಪಕ ರಾಜಾರಾಮ ಕೆ. ವಿ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಗಾಂಧೀಜಿಯವರ ನೂರ ಐವತ್ತನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಜರಗಿದ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅನುವಾದಿಸಿದ ಗಾಂಧೀಜಿಯವರ ಆತ್ಮಕಥೆ "ನನ್ನ ಸತ್ಯಾನ್ವೇಷಣೆ"ಕೃತಿಯ ಅವಲೋಕನ ಮಾಡಿ ಅವರು ಮಾತನಾಡಿದರು.
ಸಾಮಾನ್ಯನಾಗಿ ಹುಟ್ಟಿ, ಅಸಾಮಾನ್ಯ ಕಾರ್ಯಗಳನ್ನು ಸಾಧಿಸಿ ಮಹಾತ್ಮನಾಗಿ ಲೋಕ ವಿಖ್ಯಾತರಾದ ಗಾಂಧೀಜಿಯವರ ಆತ್ಮ ಚರಿತ್ರೆಯನ್ನು ಗೊರೂರು ಅವರು ಗ್ರಾಮೀಣ ಸೊಗಡಿನಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ ಎಂದರು. ವಿವಿಧ ಭಾಗಗಳಲ್ಲಿ ವಿಸ್ತಾರವಾಗಿ ಬರೆಯಲ್ಪಟ್ಟ ಕೃತಿಯ ಮುಖ್ಯಾಂಶಗಳನ್ನು ಅವರು ವಿಶ್ಲೇಶಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಂಶುಪಾಲ ದೂಮಪ್ಪು ಮೂಲ್ಯ ಮಾತನಾಡಿ ಕಾಲಘಟ್ಟದ ಆವಶ್ಯಕತೆಗನುಸಾರ ಮಹಾತ್ಮರ ಜನನವಾಗುತ್ತದೆ. ಒಂದು ಕಾಲಘಟ್ಟದಲ್ಲಿ ಅವರ ಸಿದ್ದಾಂತಗಳು ರಹದಾರಿ ತೋರಿಸಿ ಮಾರ್ಗದರ್ಶಿಯಾಗಿದ್ದುದು ಇಂದು ಅದೇ ಸಿದ್ದಾಂತ ತಪ್ಪು ಎನ್ನುವ ಕಾಲಘಟ್ಟವಾಗಿ ಬದಲಾಗಿದೆ. ಆದರೆ ಅವರ ಶೋಧನೆಗಳು ಎಂದಿಗೂ ಪ್ರಸ್ತುತತೆ ಕಳೆದುಕೊಳ್ಳದು ಎಮದು ಗಾಂಧೀಜಿಯವರ ಜೀವನದ ವಿವಿಧ ಮಜಲುಗಳ ಸಿಂಹಾವಲೋಕನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಐವತ್ತು ವರ್ಷಗಳ ಹಿಂದೆ ಜರಗಿದ ಗಾಂಧಿ ಜನ್ಮ ಶತಮಾನೋತ್ಸವವನ್ನು ಸ್ಮರಿಸಿದರು.
ಶಾಲಾ ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ರಾಜಲಕ್ಷ್ಮೀ ಗಾಂಧೀಜಿಯವರ ಬಗ್ಗೆ ಚಿಕ್ಕ,ಚೊಕ್ಕ ಭಾಷಣ ಮಾಡಿದರು.ದೇಶಭಕ್ತಿ ಗೀತೆಗಳನ್ನು ಹಾಡಿದರು.ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಡಾ.ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು. ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.