ಕುಂಬಳೆ: ವೈಜ್ಞಾನಿಕ ತಂತ್ರಜ್ಞಾನಗಳ ಲಗುಬಗೆಯ ಇಂದಿನ ಕಾಲಮಾನದಲ್ಲಿ ಒಂದೆಡೆ ಪಾರಂಪರಿಕ ಪ್ರಕೃತಿಯಿಂದ ನಾವು ವಿಮುಖಗೊಂಡು ಕೃತಕತೆಯ ಮಧ್ಯೆ ನಲುಗುತ್ತಿದ್ದೇವೆ. ಇಂತಹ ಕೃತಕತೆಯ ಏಕತಾನತೆ, ಜೀವಜಾಲಗಳ ಸಂತುಲಿತ ವ್ತವಸ್ಥೆಯಿಂದ ದೂರಸಾಗಿ ಸಂಕಷ್ಟ ಅನುಭವಿಸುವ ಈ ಹೊತ್ತಿಗೆ ಪ್ರಕೃತಿಯ ಅಗತ್ಯದ ತುರ್ತು ಇಂದು ಮತ್ತೆ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಹೊಸ ತಲೆಮಾರಿಗೆ ಜಾಗೃತಿ ಮೂಡಿಸುವ, ಪರಿಚಯ ನೀಡಿ ಹಸಿರೊಳಗೆ ಬದುಕುವ ಕಲಿಕೆ, ಬೋಧನೆಯ ಯತ್ನ ಕೆಲವೆಡೆ ಸದ್ದಿಲ್ಲದೆ ನಡೆಯುತ್ತಿದೆ.
ಕುಂಬಳೆ ಹೋಲಿ ಫ್ಯಾಮಿಲಿ ವಿದ್ಯಾಸಂಸ್ಥೆಯ ಶಿಕ್ಷಕರೂ, ಯುವ ಪ್ರಕೃತಿ-ಪಕ್ಷಿ ಪ್ರೇಮಿ ರಾಜು ಮಾಸ್ತರ್ ಕಿದೂರು ಮತ್ತು ಅವರ ತಂಡ ಹೊಸ ಯತ್ನಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯೋನ್ಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಸೃಜನಶೀಲ ಚಿಂತನೆಗಳನ್ನು ಬಿತ್ತುವುದರಲ್ಲಿ ಸಕ್ರಿಯರಾಗಿದ್ದಾರೆ.
ಮೊನ್ನೆಯಷ್ಟೇ ಆಚರಿಸಲ್ಪಟ್ಟ ಹೊಸ ವರ್ಷದ ರಜಾ ದಿನವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಮೂಲಕ ಭಾವೀ ಸಮಾಜವನ್ನು ಸಂದರಗೊಳಿಸುವ ಯತ್ನದಲ್ಲಿ ಚಟುವಟಿಕೆಯೊಂದರ ಮೂಲಕ ಗಮನ ಸೆಳೆದರು.
ಮಕ್ಕಳೆಲ್ಲರೂ ಸೇರಿ ಬೀಂಪುಳಿ ಗಿಡ ನೆಟ್ಟರು. ಕಾಡು, ಮೇಡು ಸುತ್ತಾಡಿದರು. ನೀರು ಬತ್ತಿದ ಪಳ್ಳವೊಂದರ ಚಿಂತಾಜನಕ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಚಿಟ್ಟೆಗಳನ್ನು ಗುರುತಿಸಿದರು. ಹಕ್ಕಿಗಳನ್ನು ಎಣಿಸಿದರು. ಗಿಡ-ಮರ-ಬಳ್ಳಿಗಳನ್ನು ವೀಕ್ಷಿಸಿದರು. ಎಪ್ಪತ್ತೈದು ವರ್ಷದ ಕಮಲ ಅವರೊಂದಿಗೆ ಹರಟೆ ಹೊಡೆದು ಹೊಸ ವರ್ಷದ ಕಾಣಿಕೆಯನ್ನೂ ಅರ್ಪಿಸಿದರು. ಹೀಗೆ ಜೈವ ವೈವಿಧ್ಯತೆಯ ಬೆನ್ನುಹತ್ತಿ ಹೊಸ ವರ್ಷಾಚರಣೆ ಆಚರಿಸಿದರು.
ಹೊಸ ವರ್ಷದಲ್ಲಿ ಲಭಿಸಿದ ಮೊದಲ ರಜೆಯನ್ನು ಹೀಗೆ ವಿಶಿಷ್ಟವಾಗಿ ಕಳೆದ ಮಕ್ಕಳು ಕುಂಬಳೆ ಶೇಡಿಗುಮ್ಮೆಯ ಜೈವ ವೈವಿಧ್ಯತೆಯ ಬಗ್ಗೆ ಅಧ್ಯಯನ ನಡೆಸಿದರು.
ಚಿಟ್ಟೆ, ಪಕ್ಷಿಗಳ ಗಣತಿ : ಕುಂಬಳೆ ಭಾಸ್ಕರ ನಗರದ ಬಸ್ಸು ನಿಲ್ದಾಣದಿಂದ ಆರಂಭವಾದ ಪರಿಸರ ನಡಿಗೆಯು ಶೇಡಿಗುಮ್ಮೆ ಕೇಂದ್ರೀಕೃತವಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಪಕ್ಷಿಗಳನ್ನು, 13 ತರದ ಚಿಟ್ಟೆಗಳನ್ನು ಮಕ್ಕಳು ಗುರುತಿಸಿದರು. ಯುರೋಪಿನಿಂದ ವಲಸೆ ಬರುವ ರೋಸಿ ಸ್ಟಾರ್ಲಿಗ್ ಹಾಗೂ ಗ್ರೀನ್ ವಾಬ್ರ್ಲರ ಎಂಬ ಪಕ್ಷಿಗಳನ್ನು ವೀಕ್ಷಿಸಿದರು. ಎಕ್ಕದ ಗಿಡದಲ್ಲಿ ಮೊಟ್ಟೆ ಇಟ್ಟು ಕೋಶಾವಸ್ಥೆಯಲ್ಲಿರುವ ಬ್ಲೂ ಟೈಗರ್ ಚಿಟ್ಟೆಯನ್ನೂ ನೋಡಿ ಮೊಬೈಲ್ ಚಿತ್ರೀಕರಣ ಮಾಡಿದರು.
ಗಿಡ, ಮರ, ಬಳ್ಳಿಗಳ ಪರಿಚಯ : ಪರಿಸರದಲ್ಲಿ ಕಂಡು ಬರುವ ವಿವಿಧ ಮರ, ಗಿಡ, ಬಳ್ಳಿಗಳನ್ನು ವೀಕ್ಷಿಸಿದರು. ಜೊತೆಗೆ ಪಕ್ಷಿಗಳ ಗೂಡುಗಳು, ಹೂ ಬಿಟ್ಟ ಮರದಲ್ಲಿ ಜೇನು ಹುಳುಗಳ ಝೇಂಕಾರವನ್ನೂ ಪುಟಾಣಿಗಳು ಗಮನಿಸಿದರು. ಹೂ ಬಿಟ್ಟು ಕಾಯಿಯ ರೂಪ ತಾಳುವ ನೊರೆಕಾಯಿಯ ಗಿಡವಂತೂ ಮಕ್ಕಳಿಗೆ ಕುತೂಹಲ ಕೆರಳಿಸಿತು. ಪೆÇದೆಯೊಂದರಲ್ಲಿ ಅಡಗಿದ್ದ ಮರಹಾವಿನ ದರ್ಶನವೂ ಮಕ್ಕಳಿಗೆ ದೊರಕಿತು.
ಜೈವ ವೈವಿಧ್ಯತೆಯ ಬೀಡು : ವಿಶಾಲವಾದ ಪಾರೆ, ಭತ್ತದ ಗದ್ದೆ, ಪ್ರಾಕೃತಿಕವಾದ ಸಣ್ಣ ಪಳ್ಳಗಳು, ಕಾಡು ಹಾಗು ತೋಡು ಜೊತೆಗೆ ಅಡಿಕೆ ಹಾಗು ತೆಂಗು ಕೃಷಿಯೊಂದಿಗೆ ಸಂಪದ್ಭರಿತವಾದ ಜೈವ ವ್ಯವಸ್ಥೆಯ ಬೀಡಾಗಿದೆ ಶೇಡಿಗುಮ್ಮೆ. ಈ ಪ್ರದೇಶದ ಮಕ್ಕಳು ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ಈ ಭಾಗದಲ್ಲಿ ನಡೆಯಲಿವೆ.
ಕುಂಬಳೆ ಹೋಲಿ ಫ್ಯಾಮಿಲಿ ಸರಕಾರಿ ಹೈಸ್ಕೂಲ್ ಹಾಗು ನೀರ್ಚಾಲು ಮಹಾಜನ ಸಂಸ್ಕøತ ಶಾಲೆಯ ಮಕ್ಕಳು ಭಾಗವಹಿಸಿದ ಪರಿಸರ ಅಧ್ಯಯನ ಶಿಬಿರದಲ್ಲಿ ಪಕ್ಷಿ ನಿರೀಕ್ಷಕರಾದ ಅಧ್ಯಾಪಕ ರಾಜು ಕಿದೂರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಕ್ಕಳಾದ ಜೀವಿತ್, ದೀಕ್ಷ ಹಾಗು ದಿಶ ಅವರ ಮನೆಯವರು ಅಧ್ಯಯನ ನಿರತ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದರು.