ನವದೆಹಲಿ: ಸಕಾರಾತ್ಮಕ ದೃಷ್ಟಿಕೋನ ಇಡೀ ವಿಶ್ವವನ್ನೇ ಉತ್ತಮವಾಗಿಸುತ್ತದೆ, ಪ್ರತಿಯೊಂದು ವಿಚಾರವನ್ನೂ ನಕಾರಾತ್ಮಕವಾಗಿ ನೋಡಬೇಡಿ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ತಿಳಿ ಹೇಳಿದೆ.
ಲೋಕಪಾಲ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಯಿತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಜೆಐ ರಂಜನ್ ಗಗೋಯ್, ನ್ಯಾ,ಎಲ್ ಎನ್ ರಾವ್ ಮತ್ತು ಎಸ್ ಕೆಕೌಲ್ ಅವರಿದ್ದ ತ್ರಿಸದಸ್ಯ ಪೀಠ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ತಿಳಿ ಹೇಳಿದ ಘಟನೆ ನಡೆಯಿತು.
ಪ್ರಮುಖವಾಗಿ ಲೋಕಪಾಲ್ ನೇಮಕ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿದ್ದ ವರದಿಗೆ ಆಕ್ಷೇಪ ಸಲ್ಲಿಸಿದ ಪ್ರಶಾಂತ್ ಭೂಷಣ್ ಅವರು ಲೋಕಪಾಲ್ ನೇಮಕಾತಿ ವಿಚಾರ ಸಂಪೂರ್ಣ ಪಾರದರ್ಶಕವಾಗಿರಬೇಕು. ದೇಶದ ಪ್ರಜೆಗಳು ಈ ಸಂಬಂಧ ಸಂಪೂರ್ಣ ಮಾಹಿತಿ ತಿಳಿದಿರಬೇಕು ಎಂದು ಹೇಳಿದರು. ಈ ವಾದಕ್ಕೆ ಅಡ್ಡಿ ಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ ಅವರು, ಪ್ರಶಾಂತ್ ಭೂಷಣ್ ಅವರನ್ನು ಉದ್ದೇಶಿಸಿ ಲೋಕಪಾಲ್ ನೇಮಕಾತಿ ಸಂಬಂಧ ಸರ್ಕಾರದ ಮೇಲೆ ಅನುಮಾನ ಪಡಲು ನಿಮ್ಮ ಬಳಿ ಏನಾದರೂ ಪ್ರಬಲ ಅಂಶಗಳಿವೆಯೇ..? ಲೋಕಪಾಲ್ ನೇಮಕಾತಿ ಸಂಬಂಧ ನೇಮಕವಾಗಿರುವ ಸಮಿತಿ ಕುರಿತಂತೆ ನಿಮಗೆ ಶಂಕೆಗಳೇನಾದರೂ ಇವೆಯೇ..? ಎಂದು ಪ್ರಶ್ನಿಸಿದರು.
ಜೊತೆಗೆ ಪ್ರಶಾಂತ್ ಭೂಷಣ್ ಅವರನ್ನು ಉದ್ದೇಶಿಸಿ, ಭೂಷಣ್ ಅವರೇ, ಪ್ರತೀಯೊಂದು ವಿಚಾರವನ್ನೂ ನಕಾರಾತ್ಮಕವಾಗಿ ನೋಡಬೇಡಿ.. ಸಕಾರಾತ್ಮಕ ದೃಷ್ಟಿಕೋನದಿಂದ ನೋಡಲು ಪ್ರಯತ್ನ ಪಡಿ.. ಸಕಾರಾತ್ಮಕ ದೃಷ್ಟಿಕೊನ ಇಡೀ ವಿಶ್ವವನ್ನೇ ಉತ್ತಮವಾಗಿಸುತ್ತದೆ. ನಾಳೆಯಿಂದಲೇ ಈ ಬಗ್ಗೆ ಯೋಚನೆ ಮಾಡಿ ಎಂದು ಸಿಜೆಐ ರಂಜನ್ ಗಗೋಯ್ ಹಾಸ್ಯಾತ್ಮಕವಾಗಿ ಹೇಳಿದರು.
ಅಂತೆಯೇ ಲೋಕಪಾಲ್ ಶೋಧನಾ ಸಮಿತಿ ಮಾರ್ಚ್ 7ರಂದು ಸಮಿತಿಯ ಹಸೆರನ್ನು ಶಿಫಾರಸ್ಸು ಮಾಡುವ ವಿಶ್ವಾಸವಿದೆ. ಅವಶ್ಯಕತೆ ಇಲ್ಲದ ನಿರ್ದೇಶನ ನೀಡುವಂತೆ ನಮ್ಮ ಮೇಲೆ ಒತ್ತಡ ಹೇರಬೇಡಿ. ಈಗೇನಿದ್ದರೂ ಲೋಕಪಾಲ್ ಶೋಧನಾ ಸಮಿತಿ ತಮಗೆ ನೀಡಿರುವ ಕಾಲಾವಧಿಯೊಳಗೆ ಲೋಕಾಪಲ್ ಗೆ ಹೆಸರುಗಳನ್ನು ಶಿಫಾರಸ್ಸು ಮಾಡಬೇಕು ಎಂದು ರಂಜನ್ ಗಗೋಯ್ ಅವರು ಹೇಳಿದರು.