ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಸಿಬಿಐ ನಿರ್ದೇಶಕ ರಾಕೇಶ್ ಆಸ್ತಾನ ಅವರ ಅಧಿಕಾರಾವಧಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಮೊಟಕುಗೊಳಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಿದೆ ಎಂದು ತಿಳಿದುಬಂದಿದೆ.
ಅಲೋಕ್ ವರ್ಮಾ ರಾಜಿನಾಮೆ ಪ್ರಹಸನದ ಬೆನ್ನಲ್ಲೇ ಸಿಬಿಐನಲ್ಲಿ ಮತ್ತಷ್ಟು ಚಟುವಟಿಕೆಗಳು ಗರಿಗೆದರಿದ್ದು, ಇದೀಗ ನಿನ್ನೆ ಸಂಜೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಬಿಐ ನಿರ್ದೇಶಕ ರಾಕೇಶ್ ಆಸ್ತಾನರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಿದೆ.ಕೇವಲ ರಾಕೇಶ್ ಆಸ್ತಾನ ಮಾತ್ರವಲ್ಲದೇ ಸಿಬಿಐನ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾ, ಉಪ ಇನ್ಸ್ ಪೆಕ್ಟರ್ ಜನರಲ್ ಮನೀಶ್ ಕುಮಾರ್ ಸಿನ್ಹಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಜೆ ನಾಯ್ಕನಾವರೆ ಅವರನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಅಲೋಕ್ ಕುಮಾರ್ ವರ್ಮಾ ಮತ್ತು ರಾಕೇಶ್ ಆಸ್ತಾನ ಅವರ ನಡುವಿನ ಪರಸ್ಪರ ಭ್ರಷ್ಟಾಚಾರದ ಕೆಸರೆರಚಾಟ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಲ್ಲದೇ ಸಿಬಿಐ ಸಂಸ್ಥೆಯ ಘನತೆಗೆ ಚ್ಯುತಿ ತಂದಿತ್ತು. ಅಲ್ಲದೆ ಅಲೋಕ್ ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ರಾಕೇಶ್ ಆಸ್ತಾನ ವಿರುದ್ಧ ಭ್ರಷ್ಟಾಚಾರದ ದೂರು ಕೂಡ ದಾಖಲಾಗಿತ್ತು. ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಬೆನ್ನಲ್ಲೇ ಕೇಂದ್ರ ಸರ್ಕಾರ ಎಂ ನಾಗೇಶ್ವರರಾವ್ ಅವರನ್ನು ಸಿಬಿಐನ ಹಂಗಾಮಿ ಮುಖ್ಯಸ್ಥರಾಗಿ ನೇಮಕ ಮಾಡಿತ್ತು.