ಕಾಸರಗೋಡು: ಮಾತೃಭಾಷೆ ಮುಖ್ಯವೂ, ಮಧುರವೂ, ದಿವ್ಯವೂ ಆಗಿ ಅಂತರಂಗದಪ್ರಶ್ನೆಗಳಿಗೆಅರ್ಥ ನೀಡುತ್ತದೆ. ಮಾತೃ ಭಾಷೆಗಿಂತ ಶ್ರೇಷ್ಠವಾದ ಭಾಷೆ ಬೇರೊಂದಿಲ್ಲ. ಅದನ್ನು ಉಳಿಸಿ ಬೆಳಸಬೇಕಾದದ್ದು ಆಯ ಭಾಷಿಕರ ಆದ್ಯ ಕರ್ತವ್ಯ. ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಿರಂತರ ನಡೆಸುತ್ತಿರುವ ಮುಖಾಂತರ ಅದನ್ನು ಬೆಳೆಸಲು ಸಾಧ್ಯ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.
ಅವರು ಖ್ಯಾತ ನ್ಯಾಯವಾದಿ, ಲೆಕ್ಕಪರಿಶೋಧಕ ಎಂ.ವಿಠಲ ಕುಡುವ ಅವರ ನಿವಾಸದಲ್ಲಿ ಜರಗಿದ 127 ನೇ `ಘರ್ ಘರ್ ಕೊಂಕಣಿ' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರು, ಹಿರಿಯರು ನಮಗೆ ಬಿಟ್ಟು ಹೋದ ಅತೀ ದೊಡ್ಡ ಸಂಪತ್ತೆಂದರೆ ಭಾಷೆ. ಅದನ್ನು ಜತನ, ಸ್ವಾಭಿಮಾನದಿಂದ ಕಾಪಾಡುವ ಕರ್ತವ್ಯ ಪ್ರತಿಯೊಬ್ಬ ಕೊಂಕಣಿ ಭಾಷಿಕನಿಗಿದೆ. ಹಾಗಾಗದಿದ್ದಲ್ಲಿ ಮುಂದಿನ ತಲೆಮಾರಿಗೆ ನಾವು ಮಾಡುವ ಅತೀ ದೊಡ್ಡ ಅನ್ಯಾಯವಾಗಬಹುದೆಂದರು. ಎಲ್ಲಾ ಕೊಂಕಣಿ ಬಾಂಧವರು ಭಾಷೆ ಕಲಿಸಿದ ತಾಯಿಗಾಗಿ ಮನೆಯಲ್ಲಿ ವರ್ಷಕ್ಕೊಮ್ಮೆಯಾದರೂ ದೀಪ ಬೆಳಗಿಸಬೇಕು. ಆ ಮುಖಾಂತರ ಆಕೆಗೆ ಋಣಿಯಾಗಬೇಕು. ಇದೇ `ಘರ್ ಘರ್ ಕೊಂಕಣಿ' ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರಲ್ಲದೆ, ಕೊಂಕಣಿ ಮಾತನಾಡುವ 42 ಪಂಗಡಗಳಲ್ಲಿ 30 ಪಂಗಡಗಳ ಮನೆಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ ತೃಪ್ತಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಿಯಾಲ್ ಪತ್ರಿಕೆಯ ಸಂಪಾದಕ ವೆಂಕಟೇಶ ಬಾಳಿಗಾ ಅವರು ಮಾತನಾಡಿ ಕೊಂಕಣಿ ಭಾಷೆ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದರಲ್ಲದೆ ಸಾಹಿತ್ಯ ಕೃತಿಗಳ ರಚನೆಯಾಗಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಕೊಂಕಣಿ ಭಾಷಿಕರಿಗೆ ಆತ್ಮಸ್ಥೈರ್ಯ ನೀಡುತ್ತದೆ ಎಂದರು.
ಚಿತ್ರಾಪುರ ಸಮಾಜದ ನಿರಂಜನ ರಾವ್, ದೈವಜ್ಞ ಬ್ರಾಹ್ಮಣ ಸಮಾಜದ ಪ್ರಶಾಂತ್ ಶೇಟ್, ವೈಶ್ಯವಾಣಿ ಸಮಾಜದ ವಿನಾಯಕ ಶೇಟ್, ಪುರಸಭಾ ಸದಸ್ಯೆ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮಂಗಳೂರು ಬಜಲಕೇರಿಯ ಗೋಲ್ಡನ್ ಚೇಂಬರ್‍ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸ್ವಾತಿ ನಾಯಕ್ ಪ್ರಾರ್ಥನೆಗೈದರು. ಮನೆ ಯಜಮಾನ ಎಂ.ವಿಠಲ ಕುಡುವ ಸ್ವಾಗತಿಸಿ, ರತ್ನಾಕರ ಕುಡುವ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ವಿ.ಕುಡುವ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರುತಿ ಕಾಮತ್, ಗ್ರೀಷ್ಮಾ ಕಿಣಿ, ಶ್ವೇತಾ ಕಾಮತ್, ಪೂಝಾ ಶೆಣೈ, ಮೇಘಾ ಪೈ, ಅತಿಥಿ ಕುಡುವ, ಅನನ್ಯ ಕಿಣಿ ಅವರಿಂದ ಕೊಂಕಣಿ ಭಕ್ತಿ-ಭಾವ-ಗೀತೆಗಳ ಕಾರ್ಯಕ್ರಮ ಜರಗಿತು. ಕೀಬೋರ್ಡ್‍ನಲ್ಲಿ ಪ್ರವೀಣ ಪ್ರಭು, ತಬ್ಲಾದಲ್ಲಿ ಗಜಾನನ ಶೆಣೈ ಸಹಕರಿಸಿದರು. `ಘರ್ ಘರ್ ಕೊಂಕಣಿ' ಕಾರ್ಯಕ್ರಮದ ಸಂಯೋಜನೆಯನ್ನು ರಂಗನಟ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂತೋಷ್ ಶೆಣೈ ಸಂಯೋಜಿಸಿದರು.