ಪತ್ತನಂತಿಟ್ಟು: ತೀವ್ರ ವಿರೋಧದ ನಡುವೆಯೂ ಬಿಂದು ಹಾಗೂ ಕನಕದುರ್ಗಾ ಎಂಬ ಮಹಿಳೆಯರಿಬ್ಬರು ಸದ್ದಿಲ್ಲದೆ ಶಬರಿಮಲೆ ದೇಗುವ ಪ್ರವೇಶಿಸುವ ಮೂಲಕ 800 ವರ್ಷಗಳ ಸಂಪ್ರದಾಯವನ್ನು ಮುರಿದು ಅಯ್ಯಪ್ಪನ ದರ್ಶನ ಪಡೆದಿದ್ದರು. ದೇವಸ್ಥಾನದೊಳಗೆ ಹೋಗುವಾಗ ಅಯ್ಯಪ್ಪನ ಮಾಲೆ, ಕಪ್ಪು ವಸ್ತ್ರ ಧರಿಸಿದ್ದ ಮಹಿಳೆಯರಿಬ್ಬರು ನಂತರ ಪೊಲೀಸ್ ಠಾಣೆಯಲ್ಲಿ ಹಾಕಿದ್ದ ಮಾಲೆಯನ್ನು ಬಿಚ್ಚಿ, ಬಟ್ಟೆಯನ್ನು ಬದಲಿಸಿ ಬೇರೆ ಬಟ್ಟೆಯನ್ನು ಧರಿಸಿ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
42 ವರ್ಷದ ಬಿಂದು ಕಣ್ಣೂರು ವಿಶ್ವವಿದ್ಯಾನಿಲಯದ ಕಾಲೇಜು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು 44 ವರ್ಷದ ಕನಕ ದುರ್ಗಾ ಮಲ್ಲಪುರಂನ ಅಂಗಡಿಪುರಂನ ನಾಗರಿಕ ಪೂರೈಕೆ ಇಲಾಖೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರು ನಿನ್ನೆ ಬೆಳಗ್ಗೆ 3.30 ಸುಮಾರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಹೊರ ಬಂದಿದ್ದರು. ಮಹಿಳೆಯರಿಬ್ಬರು ದರ್ಶನ ಮಾಡುತ್ತಿರುವ ವಿಡಿಯೋವನ್ನು ಅಯ್ಯಪ್ಪ ಭಕ್ತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಕೇರಳದಲ್ಲಿ ಹಿಂಸಾಚಾರ ಭುಗಿಲೇದ್ದಿತ್ತು.
ಅಯ್ಯಪ್ಪನ ದರ್ಶನ ಮಾಡಿ ಹೊರ ಬಂದ ಮಹಿಳೆಯರಿಬ್ಬರು ಅಲ್ಲೇ ಇದ್ದ ಪೊಲೀಸ್ ಠಾಣೆಗೆ ಹೋಗಿ ತಾವು ಧರಿಸಿದ್ದ ಅಯ್ಯಪ್ಪನ ಮಾಲೆಯನ್ನು ಹಾಗೂ ಕಪ್ಪು ಬಟ್ಟೆಯನ್ನು ಬದಲಿಸಿದ್ದಾರೆ. ನಿಯಮದ ಪ್ರಕಾರ ಮಾಲೆ ಹಾಕಿದ ಭಕ್ತರು ಮಾಲೆಯನ್ನು ಒಂದು ಯಾವುದಾದರೂ ದೇವಸ್ತಾನದಲ್ಲಿ ಅಥವಾ ನದಿಯಲ್ಲಿ ಇಲ್ಲದಿದ್ದರೆ ಮನೆಗೆ ಬಂದು ಪೂಜೆ ಮಾಡಿ ತೆಗೆಯಬೇಕಾಗುತ್ತದೆ. ಆದರೆ ಈ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ಮಾಲೆಯನ್ನು ಬಿಚ್ಚಿರುವುದು ಕೇವಲ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಸಲುವಾಗಿ ಮಾಲೆ ಹಾಕಿರುವುದಾಗಿ ನಾಟಕವಾಡಿದ್ದಾರೆ ಎಂಬ ಅನುಮಾನಗಳು ಮೂಡಿವೆ.