ಮಂಜೇಶ್ವರ: ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಾತಿಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಮಂಜೇಶ್ವರ ಉಪ ಜಿಲ್ಲೆಗೆ ಒಳಪಟ್ಟ ಸರಕಾರಿ ಪ್ರೌಢ ಶಾಲೆ ಬೇಕೂರು ಹಾಗೂ ಪೈವಳಿಕೆ ಕಾಯರ್ ಕಟ್ಟೆ ಶಾಲೆಗೆ ಲೋಕ ಸೇವಾ ಆಯೋಗದ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದ ಹುದ್ದೆಗೆ ಮಲಯಾಳ ಅಧ್ಯಾಪಕರ ನೇಮಕಾತಿ ಆಗಿದ್ದು ಕನ್ನಡ ಮಕ್ಕಳಿಗೆ ಇದರಿಂದ ಅನ್ಯಾಯವಾದಂತಾಗಿದೆ. ಮಂಗಲ್ಪಾಡಿ ಶಾಲೆಯಲ್ಲಿ ಆದ ಘಟನೆ ಮಾಸುವ ಮೊದಲೇ ಈ ರೀತಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕನ್ನಡದ ಗಂಧ ಗಾಳಿ ಗೊತ್ತಿರದ ಅಧ್ಯಾಪಕರ ನೇಮಕ ಆಗಿರುವುದು ಖೇದಕರ. ಇದನ್ನು ವಿರೋಧಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪ ಜಿಲ್ಲಾ ಸಮಿತಿಯ ನಿಯೋಗವು ಆ ಶಾಲೆಗಳಿಗೆ ತೆರಳಿ ಕಾನೂನಾತ್ಮಕವಾಗಿ ನಡೆಸುವ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದೆ.