ಬದಿಯಡ್ಕ: ಶಬರಿಮಲೆ ಆಚಾರ ಉಲ್ಲಂಘನೆಗೆ ತಂತ್ರ ಹೂಡುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡ ಪಾದಯಾತ್ರೆಯ ಭಾಗವಾಗಿ ಬದಿಯಡ್ಕ ಪಂಚಾಯತಿ ಸಮಿತಿಯ ವತಿಯಿಂದ ಇತ್ತೀಚೆಗೆ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು ಮಾತನಾಡಿದರು. ಕತ್ತಲೆಯ ಮರೆಯಲ್ಲಿ ಹಿಂದುಗಳ ಶ್ರದ್ಧಾಕೇಂದ್ರವನ್ನು ಹಾಳುಗೆಡಹಬೇಕೆಂಬ ಎಡರಂಗ ಸರಕಾರದ ನಿಲುವು ಖಂಡನಾರ್ಹವಾಗಿದೆ. ಶಬರಿಮಲೆ ಕ್ಷೇತ್ರದ ಆಚಾರ ಅನುಷ್ಠಾನಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಸುಪ್ರೀಕೋರ್ಟ್ ತೀರ್ಪನ್ನು ಮುಂದಿಟ್ಟು ಎಡರಂಗ ಸರಕಾರವು ಆಸ್ತಿಕ ಭಕ್ತ ಸಮೂಹವನ್ನು ವಂಚಿಸಲು ಹೊರಟಿದೆ. ಎಷ್ಟೇ ಬೆಲೆತೆತ್ತಾದರೂ ನಮ್ಮ ಧಾರ್ಮಿಕ ಕೇಂದ್ರಗಳ ಸಾನ್ನಿಧ್ಯವನ್ನು ಉಳಿಸಲು ನಾವು ಬದ್ಧರಾಗಿದ್ದೇವೆ ಎಂದರು.
ನೀರ್ಚಾಲು ಹಾಗೂ ಉಕ್ಕಿನಡ್ಕದಿಂದ ಆರಂಭವಾದ ಪಾದಯಾತ್ರೆಯು ಬದಿಯಡ್ಕದಲ್ಲಿ ಸಂಗಮಿಸಿತು. ಬದಿಯಡ್ಕ ಪಂಚಾಯತಿ ಪೂರ್ವ ವಲಯ ಅಧ್ಯಕ್ಷ ವಿಶ್ವನಾಥ ಪ್ರಭು ಕರಿಂಬಿಲ, ಪಶ್ಚಿಮ ವಲಯ ಅಧ್ಯಕ್ಷ ಕೃಷ್ಣ ಮಣಿಯಾಣಿ ಮೊಳೆಯಾರು, ನೇತಾರರಾದ ಎಂ.ನಾರಾಯಣ ಭಟ್, ಶಂಕರ ಡಿ., ಬಾಲಕೃಷ್ಣ ಶೆಟ್ಟಿ ಕಡಾರು, ಲಕ್ಷ್ಮೀನಾರಾಯಣ ಪೈ ಬಳ್ಳಂಬೆಟ್ಟು, ನ್ಯಾಯವಾದಿ ಗಣೇಶ್ ಬಿ., ಪುಷ್ಪ ಭಾಸ್ಕರ, ಪ್ರೇಮ ಕುಮಾರಿ, ರಜನೀ ಸಂದೀಪ್ ಪುಉಕೋಳಿ, ಉಮೇಶ್ ಮುಳಿಪ್ಪರಂಬು, ಬಾಲಕೃಷ್ಣ ಮಣಿಯಾಣಿ, ಈಶ್ವರ ನಾಯ್ಕ್ ಪೆರಡಾಲ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.