ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರನ್ನು ಈ ಬಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕುಲಪತಿ ಪ್ರೋಪೆಸರ್ ಮಲ್ಲಿಕಾ ಎಸ್. ಘಂಟಿ ಈ ಬಗ್ಗೆ ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಾದರ್ಶಿಗಳಾಗಿ ಸೇವೆ ಸಲ್ಲಿಸಿದ್ದ ಮನು ಬಳಿಗಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಿರ್ವಹಿಸಿದ ಕೆಲಸ ಹಾಗೂ ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಅವರಿಗೆ ಈ ಗೌರವ ಪದವಿ ಪ್ರಧಾನ ಮಾಡಲಾಗುತ್ತಿದೆ ಎಂದು ಹೇಳಿದರು.
ನಾಡೋಜಕ್ಕೆ ಮೂವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯಪಾಲರು ಮನು ಬಳಿಗಾರ ಅವರ ಒಬ್ಬರ ಹೆಸರು ಅಂತಿಮಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜನವರಿ 30 ರಂದು ಸಂಜೆ 5-30ಕ್ಕೆ ಹಂಪಿ ವಿವಿ ಆವರಣದಲ್ಲಿ ನಡೆಯಲಿರುವ 27 ನೇ ನುಡಿ ಹಬ್ಬದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಲಿಗಾರ ಅವರಿಗೆ ನಾಡೋಜ ಪ್ರಶಸ್ತಿ ಪ್ರದಾನ ಮಾಡುವರು. ವಿ????ನಿ ಎ.ಎಸ್. ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ಮಾಡುವರು ಎಂದು ತಿಳಿಸಿದರು.
ಕನ್ನಡ ಸಿನಿಮಾ ಚಾರಿತ್ರಿಕ ನೋಟ ಮತ್ತು ಕರ್ನಾಟಕ ದಲಿತ ಚಳವಳಿ ಕುರಿತು ಕ್ರಮವಾಗಿ ಪ್ರಬಂಧ ಮಂಡಿಸಿರುವ ರಾಮದಾಸ್ ನಾಯ್ಡು ಮತ್ತು ಆರ್. ಮೋಹನ್ ರಾಜ್ ಅವರಿಗೆ ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ ಅವರು ಡಿ. ಲಿಟ್ ಪದವಿ ಪ್ರಧಾನ ಮಾಡುವರು ಎಂದು ಮಲ್ಲಿಕಾ ಘಂಟಿ ವಿವರಿಸಿದರು.