ಕಾಸರಗೋಡು: ಲಿಂಪೋಡೆಮಾ ಮತ್ತು ಪೈಲೇರಿಯಾ ರೋಗಗಳ ಮಧ್ಯೆ ಭಿನ್ನತೆಗಳಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು. ಲಿಂಪೋಡೆಮಾ-ಪೈಲೇರಿಯ ನಿಯಂತ್ರಣ-ಚಿಕಿತ್ಸೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಐಎಡಿಯ ಸಾಧನೆ ಮಹತ್ವದ್ದಾಗಿದ್ದು, ಐಎಡಿಯ ಶಾಖೆಗಳು ರಾಷ್ಟ್ರದ ಎಲ್ಲಾ ರಾಜ್ಯಗಳಿಗೂ ವ್ಯಾಪಿಸಬೇಕು ಎಂಬ ಅಭಿಪ್ರಾಯಗಳು ಉಳಿಯತ್ತಡ್ಕದ ಇನ್ಸಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟೋಲಜಿ(ಐಎಡಿ)ಯಲ್ಲಿ ನಡೆಯುತ್ತಿರುವ ತ್ರಿದಿನಗಳ ವಿಚಾರ ಸಂಕಿರಣದ ಎರಡನೇ ದಿನ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ವ್ಯಕ್ತಗೊಂಡಿತು.
ಮಂಗಳವಾರ ಬೆಳಿಗ್ಗೆ ನಡೆದ ಮೊದಲ ವಿಚಾರಗೋಷ್ಠಿಯಲ್ಲಿ ಇಂಗ್ಲೆಡ್‍ನ ಆಕ್ಸ್‍ಫರ್ಡ್ ವಿವಿಯ ಚರ್ಮರೋಗ ವಿಭಾಗದ ಉಪನ್ಯಾಸಕ ಪ್ರೊ. ಟೆರೆನ್ಸ್ ಜೆ.ರೆಯಾನ್ ಹಾಗೂ ಮಂಗಳೂರು ನಿಟ್ಟೆ ವೈದ್ಯಕೀಯ ವಿವಿಯ ಯುನೆಸ್ಕೋ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಪ್ರೊ.ಇಂದ್ರಾಣಿ ಕರುಣಾಸಾಗರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಗುಜರಾಥ್ ರಾಜ್ಯದಲ್ಲಿ ಪೈಲೇರಿಯಾ ಮತ್ತು ಲಿಂಪೋಡೆಮಾ ನಿಯಂತ್ರಣ ಸಾಧನೆಗಳ ಬಗ್ಗೆ ಸೂರತ್ ಸರಕಾರಿ ವೈದ್ಯಕೀಯ ಕಾಲೇಜಿನ ಡಾ.ಅಂಜಲಿ ಮೋದಿ ಹಾಗೂ ಲಿಂಪೋಡೆಮಾ ರೋಗ ಹರಡುವಿಕೆ, ಜೀನ್ ಹಾಗೂ ಆಪ್ತ ಸಮಾಲೋಚನೆಯ ಬಗ್ಗೆ ಲಂಡನ್ ಸೈಂಟ್ ಜಾರ್ಜ್ ವಿವಿಯ ಪ್ರೊ. ಸಹರ್ ಮನ್ಸೂರ್ ವಿಚಾರ ಮಂಡನೆ ನಡೆಸಿದರು.
ಇದೇ ಸಂದರ್ಭ ಐಎಡಿ ಚಿಕಿತ್ಸಾ ಕೇಂದ್ರದಲ್ಲಿ ಲಿಂಪೋಡೆಮಾ ವೈದ್ಯಕೀಯ ಶಿಬಿರ ಮತ್ತು ಅತ್ಯಪೂರ್ವ ಚರ್ಮರೋಗಗಳ ವೈದ್ಯಕೀಯ ಶಿಬಿರ ನಡೆಸಲಾಯಿತು. ರಾಷ್ರ್ಟಮಟ್ಟದ ಖ್ಯಾತ ವೈದ್ಯರ ತಂಡ ಸಹಕರಿಸಿತು.
ಬಳಿಕ ನಡೆದ ಎರಡನೇ ವಿಚಾರ ಸಂಕಿರಣದಲ್ಲಿ ಲಿಂಪೋಡೆಮಾ ಜಾಗೃತಿ ತರಗತಿ ನಡೆಯಿತು. ಜಪಾನಿನ ಟೋಕಿಯೋದ ನೇಶನಲ್ ಸೆಂಟರ್ ಫಾರ್ ಗ್ಲೋಬಲ್ ಹೆಲ್ತ್ ಆಂಡ್ ಮೆಡಿಸಿನ್ ವಿಭಾಗದ ಡಾ. ರಿಯಾ ರೋಸೆಲಿನ್ ಯೋಟ್ಸು, ಭಾರತ ಸರಕಾರದ ನಿಕಟಪೂರ್ವ ನೀತಿ ನಿರೂಪಣಾ ಸಮಿತಿ ಉಪಾಧ್ಯಕ್ಷೆ ಡಾ. ನಂದಿನಿ ಕುಮಾರ್ ವಿಚಾರ ಮಂಡನೆ ನಡೆಸಿದರು. ಐಎಡಿಯ ಅನೀಶಾ ಎ.ಆರ್ ಸಂಯೋಜಕರಾಗಿ ಸಹಕರಿಸಿದರು. ಬಳಿಕ ಲಿಂಪೋಡೆಮಾ ರೋಗಿಗಳೊಂದಿಗೆ ಯೋಗ ಮತ್ತು ಲಿಂಪೋಡೆಮಾ ಚಿಕಿತ್ಸೆಗಳ ಕುರಿತಾದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಅಪರಾಹ್ನ ಲಿಂಪೋಡೆಮಾ ಕುರಿತಾದ ಅರಿವು ವಿಚಾರ ಗೋಷ್ಠಿ ನಡೆಯಿತು. ಪ್ರೊ.ಟೆರೆನ್ಸ್ ರಿಯಾನ್, ಡಾ.ಅಂಜಲಿ ಮೋದಿ ಉಪನ್ಯಾಸ ನೀಡಿದರು. ಐಎಡಿಯ ರೇಷ್ಮಾ ಡಿಸೋಜಾ ಸಂಯೋಜಕರಾಗಿ ಸಹಕರಿಸಿದರು. ಬಳಿಕ ನಡೆದ ವಿಶೇಷ ಚರ್ಚಾಗೋಷ್ಠಿಯಲ್ಲಿ ಪ್ರೊ.ಟೆರೆನ್ಸ್ ರೆಯಾನ್ ಅವರು ಚಿಕಿತ್ಸೆ ಮತ್ತು ಮಾನವೀಯತೆಯ ಬಗ್ಗೆ ಮಾತನಾಡಿದರು. ಭಾರತ ಸರಕಾರದ ನಿಕಟಪೂರ್ವ ನೀತಿ ಆಯೋಗದ ಉಪಾಧ್ಯಕ್ಷೆ ಡಾ.ನಂದಿನಿ ಕುಮಾರ್ ಅವರು ಆಯುಷ್ ಚಿಕಿತ್ಸಾ ವಿಭಾಗದಲ್ಲಿ ಜೆನೆಟಿಕ್ ಅಧ್ಯಯನ ಮತ್ತು ನಡೆದುಬರುತ್ತಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪ್ರೊ.ಇಂದಿರಾ ಕರುಣಾಸಾಗರ್ ಮತ್ತು ಜೈಪುರ ಜಾಮ್ ನಗರದ ಆಯುರ್ವೇದ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ.ಎಂ.ಎಸ್.ಬಗೇಲ್ ಸಂಯೋಜಕರಾಗಿ ಸಹಕರಿಸಿದರು. ಸಂಜೆ ಆಯುರ್ವೇದದಲ್ಲಿ ರೋಗ ಲಕ್ಷಣದ ಹಿನ್ನೆಲೆಯ ಚಿಕಿತ್ಸೆಯ ಬಗ್ಗೆ ಹಾಸನದ ಎಸ್‍ಡಿಎಂ ಆಯುರ್ವೇದ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಉಪನ್ಯಾಸಕ ಪ್ರೊ. ಗಿರೀಶ್ ಕೆ.ಜೆ ಅವರು ಉಪನ್ಯಾಸ ನೀಡಿದರು. ಡಾ.ಗುರುಪ್ರಸಾದ್ ಅಗ್ಗಿತ್ತಾಯ ಸಂಯೋಜಕರಾಗಿ ಭಾಗವಹಿಸಿದರು.
ಸಂಜೆ ಇಗ್ಲೆಂಡ್‍ನ ರೋಯಲ್ ಡರ್ಬೇ ಆಸ್ಪತ್ರೆಯ ಕಟೇ ರಿಚಸ್ ಅವರು ಮೊಲೆ ಕ್ಯಾನ್ಸರ್ ಲಿಂಪೋಡೆಮಾದಲ್ಲಿ ಅಧ್ಯಯನ, ಚಿಕಿತ್ಸೆಗಳ ಬಗ್ಗೆ ಉಪನ್ಯಾಸ ನೀಡಿದರು. ಮಂಗಳೂರಿನ ಮಂಗಳೂರು ಇನ್ಸಿಟ್ಯೂಟ್ ಆಫ್ ಓಂಕೋಲಜಿಯ ಡಾ.ಸುರೇಶ್ ರಾವ್ ಸಂಯೋಜಕರಾಗಿ ಭಾಗವಹಿಸಿದರು. ಈ ಸಂದರ್ಭ ನ್ಯೂಯಾರ್ಕ್ ಕ್ಯಾನ್ಸರ್ ಸೆಂಟರ್ ನ ಸಹಾಯಕ ಪ್ರಾಧ್ಯಾಪಕ ಡಾ.ಶಾಮ್ ಮಾಯಿಲಂಕೋಡಿ ಅವರೊಂದಿಗೆ ಸಂವಾದ ನಡೆಯಿತು. ಸೂರತ್ ಮುನ್ಸಿಪಲ್ ಕಾರ್ಪೋರೇಶನ್ ನ ಅಧಿಕಾರಿ ಡಾ. ಕೇಶವ್ ಜಿ.ವಿಷ್ಣುವ್ ಅವರು ಲಿಂಪೋಡೆಮಾ ನಿರ್ವಹಣೆ ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. ಡಾ.ರಿಯಾ ರೊಸೆಲಿನ್ ಯೋಟ್ಸು ಸಂಯೋಜಕರಾಗಿ ಸಹಕರಿಸಿದರು. ಡಸಾ.ನಾರಾಯಣ ಪ್ರದೀಪ್ ಐಎಡಿ ನಿರ್ದೇಶಕ ಡಾ.ಎಸ್ ಆರ್ ನರಹರಿ, ಡಾ.ಪ್ರಸನ್ನಾ ಕೆ.ಎಸ್, ಡಾ.ಗುರುಪ್ರಸಾದ್ ಅಗ್ಗಿತ್ತಾಯ, ಶ್ರುತಿ ಮೋಳ್ ಮೊದಲಾದವರು ಭಾಗವಹಿಸಿ ಚರ್ಚೆ ನಿರ್ವಹಿಸಿದ್ದರು.
ಇಂದಿನ ಕಾರ್ಯಕ್ರಮ:
ಬುಧವಾರ ಬೆಳಿಗ್ಗೆ 8 ರಿಂದ 8.30ರ ವರೆಗೆ ಆನೆಕಾಲು ರೋಗಬಾಧಿತರಾಗಿ ಐಎಡಿಯಲ್ಲಿ ಚಿಕಿತ್ಸೆಪಡೆಯುತ್ತಿರುವವರಿಂದ ಜಾಗೃತಿ ಜಾಥಾ ಉಳಿಯತ್ತಡ್ಕ ಪೇಟೆಯಲ್ಲಿ ನಡೆಯಲಿದೆ. ಐಎಡಿ ವೈದ್ಯಕೀಯ ತಂಡ, ರಾಷ್ಟ್ರೀಯ-ಅಂತರಾಷ್ಟ್ರೀಯ ವೈದ್ಯ ವಿಜ್ಞಾನಿಗಳು, ಆಹ್ವಾನಿತ ಗಣ್ಯರು, ಕೇಂದ್ರ ಸರಕಾರದ ಆಯುಷ್ ಖಾತೆಯ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಕೊಟೇಚ ಸಹಿತರಾದವರು ಭಾಗವಹಿಸುವರು. ಬಳಿಕ 9.30ರಿಂದ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಡಾ.ಎಸ್.ಆರ್ ನರಹರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಸಾಲಿನ ವಿಚಾರ ಸಂಕಿರಣದ ಘೋಷವಾಕ್ಯದ ಬಗ್ಗೆ ಮಾರ್ಗದರ್ಶಿ ದಿಕ್ಸೂಚಿ ಭಾಷಣ ಮಾಡುವರು. ಡಾ.ಟೆರೆನ್ಸ್ ಜ ರೆಯಾನ್ ಸಂಯೋಜಿತ ಚಿಕಿತ್ಸಾ ಪರಿಣಾಮದ ಬಗ್ಗೆ, ಐಎಡಿ ಸಂಯೋಜಿತ ಚಿಕಿತ್ಸಾ ಕ್ರಮದಬಗೆಗಿನ ವಿದೇಶ ದೃಷ್ಟಿಕೋನದ ಬಗ್ಗೆ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವ ಕೇಂದ್ರ ಸರಕಾರದಾಯುಷ್ ಖಾತೆ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್ ಕೊಟೇಚಾ ಅವರು ಪ್ರಸ್ತುತ ಸಾಲಿನ ಘೋಷವಾಕ್ಯ ಬಿಡುಗಡೆಗೊಳಿಸಿ ಮಾತನಾಡುವರು. ಭಾರತ ಸರಕಾರದ ನಿಕಟಪೂರ್ವ ಎಥಿಕ್ ಸಮಿತಿಯ ಅಧ್ಯಕ್ಷೆ ನಂದಿನಿ ಕೆ.ಕುಮಾರ್ ಹಾಗೂ ಪ್ರೊ.ಎಂ.ಎಸ್. ಬಾಗೇಲ್ ಉಪಸ್ಥಿತರಿದ್ದು ಶುಭಹಾರೈಸುವರು. ಐಎಡಿ ನಿರ್ದೇಶಕ ಡಾ.ಟಿ.ಎ.ಬೈಲೂರು ಉಪಸ್ಥಿತರಿರುವರು.
ಅಪರಾಹ್ನ 3ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಪ್ರೊ.ಟೆರೆನ್ಸ್ ಜೆ.ರೆಯಾನ್, ಲಂಡನ್‍ನ ಸೈಂಟ್ ಜಾರ್ಜ್ ವಿವಿಯ ಪ್ರೊ.ಪೀಟರ್ ಮೋರ್ಟಿಮರ್, ಜೆಎಸ್‍ಎಸ್ ಉನ್ನತ ವಿದ್ಯಾಭ್ಯಾಸ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ. ಮೃತ್ಯುಂಜಯ, ಜಪಾನಿನ ಟೋಕಿಯೋದಲ್ಲಿರುವ ಅಂತರಾಷ್ಟ್ರೀಯ ಆರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರದ ಡಾ.ರೀ ರೊಸೆಲ್ಲಿನ್ ಯೋಟ್ಸು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಮಾರೋಪ ಭಾಷಣ ಮಾಡುವರು. ಡಾ.ಗುರುಪ್ರಸಾದ್ ಅಗ್ಗಿತ್ತಾಯ ಉಪಸ್ಥಿತರಿರುವರು.