ಮಂಜೇಶ್ವರ: ಗುರುವಾರ ಹಾಗೂ ಶುಕ್ರವಾರಗಳಂದು ನಡೆದ ಹರತಾಳದಲ್ಲಿ ವ್ಯಾಪಾರ ಕೇಂದ್ರಗಳ ಮೇಲೆ ನಡೆಸಿದ ದಾಳಿಯಲ್ಲಿ ಅಪಾರ ನಷ್ಟವನ್ನು ಅನುಭವಿಸಿದ ವ್ಯಾಪರಿಗಳಿಗೆ ಆರೋಪಿಗಳಿಂದಲೇ ನಷ್ಟ ಪರಿಹಾರವನ್ನು ಪಡೆದು ನೀಡಬೇಕಾಗಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾಧ್ಯಕ್ಷ ಕೆ ಆಹ್ಮದ್ ಶೆರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರತಾಳ ದಿನದಂದು ಉಂಟಾದ ಅಕ್ರಮ ಘಟನೆಗಳಲ್ಲಿ ಬಂದ್ಯೋಡಿನಲ್ಲಿ ಸುಮಾರು 30ರಷ್ಟು ವ್ಯಾಪಾರ ಕೇಂದ್ರಗಳು ಹಾಗೂ ಕಾಸರಗೋಡಿನಲ್ಲಿ ಸುಮಾರು 5 ವ್ಯಾಪಾರ ಕೇಂದ್ರಗಳಿಗೂ ನಡೆದ ಆಕ್ರಮಣದಲ್ಲಿ 30 ಲಕ್ಷ ರೂ. ತನಕ ನಷ್ಟ ಉಂಟಾಗಿದೆ.
ಪೊಲೀಸರು ವಾಗ್ದಾನ ನೀಡಿದ ಸುರಕ್ಷೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಜೊತೆಗೆ ಕಿಡಿಗೇಡಿಗಳ ಅಟ್ಟಹಾಸದಿಂದ ವ್ಯಾಪಾರಿಗಳಿಗೆ ಭಾರೀ ನಷ್ಟ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಯಾವ ಹರತಾಳಕ್ಕೂ ಸಹಕರಿಸದಿರಲು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನಿರ್ಧಾರ ಕೈಗೊಂಡಿದೆ. ವ್ಯಾಪಾರಿ ಸಂಘಟನೆಗಳ ವಿರುದ್ದ ಸಿಡಿದೆದ್ದು ವ್ಯಾಪಾರ ಕೇಂದ್ರಗಳಿಗೆ ಹಾನಿಯನ್ನುಂಟುಮಾಡುವವರ ವಿರುದ್ದ ಜಾಮೀನು ರಹಿತ ಕೇಸು ದಾಖಲಿಸಿ ಅವರಿಂದಲೇ ನಷ್ಟ ಪರಿಹಾರವನ್ನು ನೀಡುವಂತೆ ಪೊಲೀಸ್ ಅಧಿಕಾರಿಗಳು ಮುಂದಾಗಬೇಕಾಗಿ ನೇತಾರರು ಹೇಳಿದರು.
ಮಂಜೇಶ್ವರ ಪ್ರೆಸ್ ಕ್ಲಬ್ಬಿನಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಜೆ. ಶಾಜಿ, ಕೆ.ಐ. ಮೊಹಮ್ಮದ್ ರಫೀಕ್, ಕೆ.ಮಣಿಕಂಠನ್, ಜಬ್ಬಾರ್ ಉಪ್ಪಳ, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.