ಬದಿಯಡ್ಕ: ನೀರ್ಚಾಲಿನಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಸೂರಂಬೈಲು ನಿವಾಸಿ ಗೋಪಾಲಕೃಷ್ಣ ಗಟ್ಟಿ (57) ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಗುಣಮುಖರಾಗದೆ ಕುಟುಂಬದ ಆರ್ಥಿಕ ಅಡಚಣೆಯಿಂದ ಚಿಕಿತ್ಸೆಯಿಂದ ಹಿಂದೆ ಸರಿಯಬೇಕಾಗಿ ಬಂದಿದೆ.
ಎಂದಿನಂತೆ ಹೋಟೆಲ್ ವೃತ್ತಿಯನ್ನು ಮುಗಿಸಿ ಡಿಸೆಂಬರ್ 15ರಂದು ರಾತ್ರಿ 8 ಗಂಟೆಗೆ ಸೂರಂಬೈಲಿನಲ್ಲಿ ಹಾಲು ಖರೀದಿಸಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಇವರಿಗೆ ಅಪಘಾತ ಸಂಭವಿಸಿದೆ. ಕೂಡಲೇ ಕುಂಬಳೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಉನ್ನತ ಚಿಕಿತ್ಸೆಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ 5 ದಿನಗಳ ಚಿಕಿತ್ಸೆಯನ್ನು ನೀಡಲಾಗಿತ್ತು. 75 ಸಾವಿರಕ್ಕಿಂತಲೂ ಹೆಚ್ಚು ಮೊತ್ತ ಅಂದು ಖರ್ಚಾಗಿತ್ತು. ಹಣದ ಕೊರತೆಯಿಂದ ಅಲ್ಲಿಂದ ಮನೆಗೆ ಕರೆತಂದಿದ್ದರು. ಕೆಲವು ದಿನಗಳ ನಂತರ ಕೈಕಾಲುಗಳಿಗೆ ಬಲವಿಲ್ಲದೆ, ನಡೆದಾಡಲೂ ಆಗದ ಸ್ಥಿತಿಗೆ ತಲುಪಿದ್ದು, ಕಾಸರಗೋಡು ಸರಕಾರೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಅಗತ್ಯ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ವೈದ್ಯರ ನಿರ್ದೇಶನದಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಯಿತು. ಸ್ವಲ್ಪ ದಿನ ಚಿಕಿತ್ಸೆಯನ್ನು ನೀಡಿ ಆರ್ಥಿಕ ಮುಗ್ಗಟ್ಟಿನಿಂದ ಪುನಃ ಇದೀಗ ಮನೆಗೆ ತಲುಪಿಸಲಾಗಿದೆ. ಮನೆಯಲ್ಲಿ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿರುವ ಇವರು ಮಧುಮೇಹ ಖಾಯಿಲೆಯಿಂದಲೂ ಬಳಲುತ್ತಿದ್ದಾರೆ. ವೈದ್ಯರ ಸಲಹೆಯಂತೆ ಕುತ್ತಿಗೆಯಲ್ಲಿ ತೂತನ್ನು ಮಾಡಿ ಓಕ್ಸಿಜನ್ ಹಾಗೂ ಆಹಾರ ನೀಡಲಾಗುತ್ತಿದ್ದು ಚಿಕಿತ್ಸೆಯನ್ನು ಅರ್ಧದಲ್ಲಿ ನಿಲ್ಲಿಸಲಾಗಿದೆ.
ಓರ್ವ ಪುತ್ರ ಸುಜಿತ್ ಕೂಲಿ ಕೆಲಸವನ್ನು ಮಾಡಿದರೆ ಮಾತ್ರ ದಿನವೆಚ್ಚವನ್ನು ಸರಿದೂಗಿಸಬಹುದು ಎಂದು ಅವರ ಪತ್ನಿ ಜಯಂತಿ ತಿಳಿಸಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಜಯಂತಿಯವರು ನೀರ್ಚಾಲು ನಿವೇದಿತಾ ಸೇವಾಮಿಶನ್ ಕಾರ್ಯಕರ್ತರನ್ನು ಸಂಪರ್ಕಿಸಿದರು. ಈ ನಿಟ್ಟಿನಲ್ಲಿ ನಿವೇದಿತಾ ಸೇವಾ ಮಿಶನ್ ಧನಸಂಗ್ರಹ ಅಭಿಯಾನ ಆರಂಭಿಸಿದ್ದು, ಸಹಾಯವನ್ನು ನೀಡ ಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗಿದೆ. ಜಯಂತಿ, ಕೇರಳ ಗ್ರಾಮೀಣ ಬ್ಯಾಂಕ್ ಕುಂಬಳೆ, ಖಾತೆ ನಂಬ್ರ : 40517101033236, ಐಎಫ್‍ಎಸ್‍ಸಿ ಕೋಡ್ : ಕೆಎಲ್‍ಜಿಬಿ0040517. ಉನ್ನತ ಚಿಕಿತ್ಸೆಯನ್ನು ನೀಡಬೇಕಾದರೆ ಲಕ್ಷಗಟ್ಟಲೆ ಹಣದ ಅಗತ್ಯವಿದ್ದು, ಹೆಚ್ಚಿನ ವಿವರಗಳಿಗೆ ಜಯಂತಿಯವರ ಸಂಚಾರವಾಣಿ 9387394359ನ್ನು ಸಂಪರ್ಕಿಸಬಹುದಾಗಿದೆ.